ಕೃಷಿಕರನ್ನು ಕಾಡುವ ಕೀಟ ಹತೋಟಿಗೆ ಇಲ್ಲಿವೆ ಕಡಿಮೆ ಖರ್ಚಿನ ಮೋಹಕ ಬಲೆಗಳು Pest Control Traps in Agriculture

ಕಡಿಮೆ ವೆಚ್ಚದಲ್ಲಿ ನವೀನ ತಾಂತ್ರಿಕತೆಗಳನ್ನು ಬಳಸಿಕೊಂಡು ಸಮರ್ಥವಾಗಿ ಕೀಟ ಪೀಡೆ ನಿಯಂತ್ರಿಸಬಹುದು. ಅಂತಹ ತಂತ್ರಗಳಲ್ಲಿ ಮೋಹಕ ಬಲೆಗಳ ಪಾತ್ರ ಮಹತ್ವವಾದದ್ದು. ಬಲೆಗಳನ್ನು ಉಪಯೋಗಿಸಿ ಕೀಟಗಳನ್ನು ಆಕರ್ಷಣೆ ಮಾಡಿಕೊಳ್ಳಬಹುದು. ಇಂತಹ ಬಲೆಗಳು ಹಲವಾರು ಬಗೆಯಲ್ಲಿ ಸಿಗುತ್ತವೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಕಾಡುವ ಕೀಟಗಳನ್ನು ಆಕರ್ಷಿಸಿ ಕೊಲ್ಲುವ ಬಲೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ...

Oct 12, 2024 - 20:19
WhatsApp - 1 WhatsApp - 2 WhatsApp - 3 Join Telegram

ಕೃಷಿಕರನ್ನು ಕಾಡುವ ಕೀಟ ಹತೋಟಿಗೆ ಇಲ್ಲಿವೆ ಕಡಿಮೆ ಖರ್ಚಿನ ಮೋಹಕ ಬಲೆಗಳು Pest Control Traps in Agriculture

Kannada Mitra - News Desk.

ಕೃಷಿಯಲ್ಲಿ ಕೀಟ ಪೀಡೆ (Pests in Agriculture) ದೊಡ್ಡ ಸಮಸ್ಯೆಯಾಗುತ್ತಿದೆ. ನಾನಾ ಬಗೆಯ ಕೀಟಗಳ ಹಾವಳಿಯಿಂದಾಗಿಯೇ ಇಳುವರಿ ಕುಂಠಿತವಾಗುತ್ತಿದೆ. ಕೀಟಗಳ ಹತೋಟಿಗಾಗಿ (Pest Control) ಯಥೇಚ್ಛ ಹಣ ವ್ಯಯವಾಗುತ್ತಿದೆ. ಬಹುಮುಖ್ಯವಾಗಿ ಕೀಟ ಹತೋಟಿಗಾಗಿ ಬಳಸುವ ಕಾರ್ಕೋಟಕ ವಿಷಗಳು ಪರಿಸರವನ್ನೇ ಹಳ್ಳ ಹಿಡಿಸುತ್ತಿವೆ. ಕೀಟಗಳ ನಿಯಂತ್ರಣಕ್ಕೆ ಬಳಸುವ ರಾಸಾಯನಿಕಗಳಿಂದಾಗಿಯೇ ಪ್ರಕೃತಿ ವಿಷದ ಮಡುವಾಗುತ್ತಿದೆ. ಹೀಗಾಗಿ ಕೀಟ ಪೀಡೆ ಕೃಷಿ ಕ್ಷೇತ್ರದ ಪೆಡಂಭೂತವಾಗಿ ಪರಿಣಮಿಸುತ್ತಿದೆ.

ಆದರೆ ಕಡಿಮೆ ವೆಚ್ಚದಲ್ಲಿ, ಪ್ರಕೃತಿಗೆ ಹೆಚ್ಚಿನ ಹಾನಿಯುಂಟು ಮಾಡದೇ ನವೀನ ತಾಂತ್ರಿಕತೆಗಳನ್ನು ಬಳಸಿಕೊಂಡು ಸಮರ್ಥವಾಗಿ ಕೀಟ ಪೀಡೆ ನಿಯಂತ್ರಿಸಬಹುದು. ಅಂತಹ ತಂತ್ರಗಳಲ್ಲಿ ಮೋಹಕ ಬಲೆಗಳ ಪಾತ್ರ ಮಹತ್ವವಾದದ್ದು. ಬಲೆಗಳನ್ನು ಉಪಯೋಗಿಸಿ ಕೀಟಗಳನ್ನು ಆಕರ್ಷಣೆ ಮಾಡಿಕೊಳ್ಳಬಹುದು. ಮಾತ್ರವಲ್ಲ ಕೀಟಗಳ ಚಟುವಟಿಕೆ, ಸಮೀಕ್ಷೆ ಮತ್ತು ಅವುಗಳು ಬರುವ ಮುನ್ಸೂಚನೆಗಳನ್ನು ತಿಳಿಯಬಹುದು. ಬಲೆಗಳು ಹಲವಾರು ಬಗೆಯಲ್ಲಿ ಸಿಗುತ್ತವೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಕಾಡುವ ಕೀಟಗಳನ್ನು ಆಕರ್ಷಿಸಿ ಕೊಲ್ಲುವ ಬಲೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. 

ಬೆಳಕಿನ ಬಲೆಗಳು light traps

ಅನೇಕ ಬಗೆಯ ಕೀಟಗಳು ಸಾಮೂಹಿಕವಾಗಿ ಬೆಳಕಿನ ಕಡೆಗೆ ಆಕರ್ಷಣೆಯಾಗುವುದು ಸಹಜ. ಹೆಚ್ಚಾಗಿ ಮೊದಲ ಮಳೆ ಬಿದ್ದಾಗ ಭೂಮಿಯಲ್ಲಿರುವ ನಾನಾ ಬಗೆಯ ಕೀಟಗಳು ಬೆಳಕಿನ ಕಡೆಗೆ ಹೋಗುತ್ತವೆ. ಬೆಳಕಿನ ಬಲೆಗಳು ಗಂಡು ಮತ್ತು ಹೆಣ್ಣು ಕೀಟಗಳೆರಡನ್ನು ಆಕರ್ಷಣೆ ಮಾಡುತ್ತವೆ. ಬೇರು ತಿನ್ನುವ ಕೀಟಗಳು, ಕೆಂಪು ತಲೆ ಕಂಬಳಿ ಹುಳು, ಜಿಗಿಹುಳುಗಳು, ಪತಂಗಗಳು ಮುಂತಾದ ಕೀಟಗಳನ್ನು ಬೆಳಕಿನ ಬಲೆ ಉಪಯೋಗಿಸಿ ಖೆಡ್ಡಾಕ್ಕೆ ಬೀಳಿಸಬಹುದು.

ಇದನ್ನೂ ಓದಿ: ಸಣ್ಣ ರೈತರ ಆದಾಯ ಹೆಚ್ಚಿಸುವ ಬಹುಪದರ ಬೆಳೆ ಪದ್ಧತಿ Multilayer Farming System

ಬೆಳಕಿನ ಬಲೆಗಳಲ್ಲಿ ಹೆಚ್ಚು ಪ್ರಕಾಶಿಸುವ ಬಲ್ಬ್ಗಳನ್ನು ಉಪಯೋಗಿಸಿ ಕೀಟಗಳನ್ನು ಆಕರ್ಷಣೆ ಮಾಡಬಹುದು ಮತ್ತು ಬೆಳಕಿನ ಬಲೆಗೆ ಬಿದ್ದ ಕೀಟಗಳನ್ನು ಸಾಯಿಸಲು ಸಾಬೂನು ನೀರು ಅಥವಾ ಕೀಟನಾಶಕಗಳನ್ನು ನೀರಿನೊಂದಿಗೆ ಬೆರೆಸಿ ಬಲೆಯ ಒಳಗಡೆ ಇಡಬಹುದು. ಬೆಳಕಿನ ಬಲೆಗಳನ್ನು ಪ್ರತೀ ಹೆಕ್ಟೇರ್‌ಗೆ ಒಂದರಂತೆ ಬೆಳೆಯ ಮಟ್ಟಕ್ಕಿಂತ 15 ಸೆಂ. ಮೀಟರ್ ಎತ್ತರದಲ್ಲಿ ಅಳವಡಿಸಬೇಕು. ಸಂಜೆ 6 ರಿಂದ ರಾತ್ರಿ 11ರ ವರೆಗೆ ಹಾಕಬಹುದು. ಬಲೆಯಲ್ಲಿ ಸತ್ತುಬಿದ್ದ ಕೀಟಗಳನ್ನು ಪ್ರತಿದಿನವೂ ಸ್ವಚ್ಛಗೊಳಿಸಬೇಕು.

ಆಕರ್ಷಕ ಬಲೆಗಳು Attractive traps

ಕೀಟಗಳನ್ನು ಆಕರ್ಷಿಸಲು ಕೆಲವು ರಾಸಾಯನಿಕಗಳು ಸಿಗುತ್ತವೆ. ಅಂತಹ ರಾಸಾಯನಿಕಗಳನ್ನು ಬಲೆಗಳಲ್ಲಿಟ್ಟು ಕೀಟಗಳನ್ನು ಆಕರ್ಷಣೆ ಮಾಡಿ ಕೊಲ್ಲಬಹುದು. ಈ ಪೈಕಿ ಮಿಥೈಲ್ ಯುಜಿನಾಲ್ ಬಲೆ ಪ್ರಮುಖವಾದದ್ದು. ಮಾವು ಮತ್ತು ಇನ್ನಿತರ ಹಣ್ಣಿನ ಬೆಳೆಗಳಲ್ಲಿ ಕಂಡು ಬರುವ ಹಣ್ಣಿನ ನೊಣಗಳನ್ನು ನಿಯಂತ್ರಣ ಮಾಡಲು ಮಿಥೈಲ್ ಯುಜಿನಾಲ್ ಬಲೆಗಳನ್ನು ಉಪಯೋಗಿಸಬೇಕು. 250 ಮಿ. ಲೀ ಗಾತ್ರದ ಯಾವುದೇ ಹಳೇ ಬಾಟಲ್‌ಗಳಲ್ಲಿ 100 ಮಿ. ಲೀ ದ್ರಾವಣವನ್ನು ಬಳಸಬೇಕು. ಪ್ರತಿ ಲೀಟರ್ ನೀರಿನಲ್ಲಿ 1.0 ಮಿ. ಲೀ. ಮಿಥೈಲ್ ಯುಜಿನಾಲ್ ಮತ್ತು 1.0 ಮಿ. ಲೀ ಮೆಲಾತಿಯಾನ್ ಕೀಟನಾಶಕ ಬೆರೆಸಿದ ದ್ರಾವಣವನ್ನು ಈ ಬಲೆಯಲ್ಲಿ ಹಾಕಬೇಕು.

ಇಂತಹ 10 ಬಲೆಗಳನ್ನು ಪ್ರತಿ ಹೆಕ್ಟೆರ್ ಪ್ರದೇಶದಲ್ಲಿ ಮರಗಳ ರೆಂಬೆಗಳಿಗೆ ತೂಗು ಹಾಕಬೇಕು. ಸಿಕ್ಕಿಬಿದ್ದ ಹಣ್ಣುನೊಣಗಳನ್ನು ಎರಡು ದಿನಕ್ಕೊಮ್ಮೆ ಹೊರ ಹಾಕಬೇಕು. ಪ್ರತಿ 30 ರಿಂದ 40 ದಿನಗಳಿಗೊಮ್ಮೆ ಮಿಥೈಲ್ ಯುಜಿನಾಲ್ ಲೂರ್‌ಗಳನ್ನು ಬದಲಾಯಿಸಬೇಕು. ಮಿಥೈಲ್ ಯುಜಿನಾಲ್ ಲೂರನ್ನು ಎಲ್ಲಾ ರೀತಿಯ ಹಣ್ಣು ಬೆಳೆಗಳಲ್ಲಿ ಹಣ್ಣು ಕಟ್ಟಿದಾಗಿನಿಂದ ಕಟಾವು ಮಾಡುವ ತನಕ ಬಳಸಬಹುದು.

ಇದನ್ನೂ ಓದಿ: ಈ ಲಕ್ಷಣಗಳು ಇದ್ದರೆ ಮಾತ್ರ ಅದು ಶುದ್ಧ ಬಂಡೂರು ಕುರಿ Pure Bandur Sheep Characteristics

ಬಣ್ಣದ ಅಂಟು ಬಲೆಗಳು Colored glue traps

ಕೆಲವೊಂದು ಕೀಟಗಳು ತಮಗೆ ಇಷ್ಟವಾದ ಬಣ್ಣಗಳಿಗೆ ಆಕರ್ಷಣೆಯಾಗುತ್ತವೆ. ಅಂತಹ ಕೀಟಗಳನ್ನು ಆಕರ್ಷಿಸಿಕೊಳ್ಳಲು ಗ್ರಿಸ್ ಅಥವಾ ಅಂಟು ದ್ರಾವಣದಿಂದ ಲೇಪಿತವಾಗಿರುವ ಬಣ್ಣದ ಕಾಗದಗಳನ್ನು ಇಟ್ಟು ಕೀಟಗಳನ್ನು ನಿಯಂತ್ರಣ ಮಾಡಬಹುದು. ಉದಾಹರಣೆಗೆ ಬಿಳಿನೊಣಗಳನ್ನು ನಿಯಂತ್ರಿಸಲು ಹಳದಿ ಬಣ್ಣದ ಬಲೆಗಳನ್ನು ಮತ್ತು ಸಸ್ಯ ಹೇನುಗಳನ್ನು ನಿಯಂತ್ರಿಸಲು ನೀಲಿ ಬಣ್ಣದ ಬಲೆಗಳನ್ನು ಬಳಸಹುದು. ಬೆಳೆಗಳನ್ನು ಪಾಲಿಹೌಸ್‌ಗಳಲ್ಲಿ ಬೆಳೆಯುವುದಾದರೆ ಹಳದಿ ಅಥವಾ ನೀಲಿ ಬಣ್ಣದ ಪ್ಲಾಸ್ಟಿಕ್ ಪೇಪರ್‌ಗಳಿಗೆ ಅಡುಗೆ ಎಣ್ಣೆಯನ್ನು ಸವರಿ ಬಳಸಬಹುದು. 

ಅಂಟು ಬಲೆಗಳನ್ನು ಪ್ರತೀ ಎಕರೆಗೆ 10 ರಿಂದ 20ರಂತೆ ಬೆಳೆಯ ಎತ್ತರಕ್ಕಿಂತ 15 ಸೆಂ. ಮೀಟರ್ ಎತ್ತರದಲ್ಲಿ ಅಳವಡಿಸಬೇಕು. ಪ್ರತಿ ಎರಡು ವಾರಕ್ಕೊಮ್ಮೆ ಅಂಟು ಬಲೆಗಳನ್ನು ಬದಲಾಯಿಸಬೇಕು. ಧೂಳು ಅಥವಾ ಕೀಟಗಳ ಶೇಕರಣೆಯಿಂದಾಗಿ ಬಲೆಯ ಮೇಲ್ಮೆöÊ ಪೂರ್ಣ ಪ್ರಮಾಣ ತುಂಬಿದ್ದರೆ ಅಥವಾ ಬಲೆಗಳು ನೆಲದ ಮೇಲೆ ಕಂಡು ಬಂದರೆ ಅಥವಾ ಯಾವುದೇ ರೀತಿ ಹಾನಿಗೊಳಗಾದರೆ ತಕ್ಷಣ ಅವುಗಳನ್ನು ಬದಲಾಯಿಸಬೇಕು.

ಲಿಂಗಾಕರ್ಷಕ ಬಲೆಗಳು  Sex attractant traps

ಒಂದು ಕೀಟವು ತನ್ನ ದೇಹದಿಂದ ರಾಸಾಯನಿಕ ವಸ್ತುವನ್ನು ಹೊರಹಾಕಿ ಅದೇ ಜಾತಿಯ ಇನ್ನೊಂದು ಲಿಂಗದ ಕೀಟವನ್ನು ಸಮ್ಮಿಲನಕ್ಕಾಗಿ ಆಕರ್ಷಿಸುವ ಸಂದೇಶವನ್ನು ಸಾರುವ ರಾಸಾಯನಿಕಗಳಿಗೆ ಲಿಂಗಾಕರ್ಷಕಗಳೆAದು ಕರೆಯುತ್ತಾರೆ. ಸಾಮಾನ್ಯವಾಗಿ ಹೆಣ್ಣು ಕೀಟ ರಾಸಾಯನಿಕಗಳನ್ನು ಸ್ರವಿಸಿ ಗಂಡು ಕೀಟಗಳನ್ನು ತನ್ನೆಡೆೆಗೆ ಆಕರ್ಷಿಸುತ್ತದೆ. ಈ ತತ್ವವನ್ನು ಅನುಸರಿಸಿ ವಿವಿಧ ಕೀಟಗಳ ಲಿಂಗಾಕರ್ಷಕ ವಸ್ತುಗಳನ್ನು ಕೃತಕವಾಗಿ ತಯಾರು ಮಾಡಿ ಕೀಟಗಳ ನಿರ್ವಹಣೆಯಲ್ಲಿ ಉಪಯೋಗಿಸುತ್ತಾರೆ.

ಈ ಲಿಂಗಾಕರ್ಷಕಗಳನ್ನು ತಯಾರು ಮಾಡಿ ರಬ್ಬರ್ ನಳಿಕೆಯಲ್ಲಿ ಸೇರಿಸಿ ಒದಗಿಸುತ್ತಾರೆ. ಇವುಗಳನ್ನು ‘ಲೂರ್’ ಎಂದು ಕರೆಯುತ್ತಾರೆ. ಇವುಗಳನ್ನು ವಿವಿಧ ಆಕಾರಗಳಲ್ಲಿ ಮತ್ತು ಬಣ್ಣಗಳಲ್ಲಿ ಕಾಣಬಹುದು. ಒಂದು ಕೀಟಕ್ಕೆ ತನ್ನದೇ ಆದ ನಿರ್ದಿಷ್ಟ ಲಿಂಗಾಕರ್ಷಕ ಇರುತ್ತದೆ ಮತ್ತು ಅದೇ ಜಾತಿಯ ಇನ್ನೊಂದು ಲಿಂಗದ ಕೀಟವನ್ನು ಮಾತ್ರ ಇದು ಆಕರ್ಷಣೆ ಮಾಡಬಲ್ಲದು. ಈ ಲೂರ್‌ಗಳನ್ನು ಬಲೆಯಲ್ಲಿಟ್ಟಾಗ ಗಂಡು ಕೀಟಗಳು ಅಲ್ಲಿ ಹೆಣ್ಣು ಕೀಟಗಳು ಇರಬಹುದೆಂದು ಊಹಿಸಿ ಬಂದು ಮೋಸ ಹೋಗಿ ಬಲೆಯಲ್ಲಿ ಬೀಳುತ್ತವೆ. ಈ ಬಲೆಗಳನ್ನು ‘ಮೋಹಕ ಬಲೆ’ಗಳೆಂದು ಸಹ ಕರೆಯುತ್ತಾರೆ.

ಇದನ್ನೂ ಓದಿ: ರೈತರಿಗೆ ವರದಾನ, ಮಾಹಿತಿಯ ಆಗರ ಬೆಂಗಳೂರು ಜಿಕೆವಿಕೆ ಕೃಷಿ ಮೇಳ | ಸಬ್ಸಿಡಿ ಕೃಷಿ ಯಂತ್ರೋಪಕರಣ, ಬೀಜ, ಗೊಬ್ಬರ, ತಂತ್ರಜ್ಞಾನದ ಮಾಹಾಜಾತ್ರೆ

ತೋಳಿನಾಕಾರದ ಬಲೆ 

ಇದನ್ನು ಒಂದು ಬಿದಿರು ಕೋಲಿಗೆ ಕಟ್ಟಿ ಹೊಲದಲ್ಲಿ ಹಾಕಬೇಕು. ಬಲೆಯ ಮಧ್ಯದಲ್ಲಿ ಲಿಂಗಾಕರ್ಷಕಯುಕ್ತ ನಳಿಕೆಯನ್ನು (ಲೂರ್) ಇಡಬೇಕು. ಪ್ರತಿ ಎಕರೆಗೆ 2 ರಿಂದ 3 ಬಲೆಗಳಂತೆ ಉಪಯೋಗಿಸಬಹುದು. ಬೆಳೆಯ ಮಟ್ಟದಿಂದ ಬಲೆಯ ಎತ್ತರ ಕನಿಷ್ಟ ಒಂದು ಅಡಿ ಇರಬೇಕು. ಒಂದು ಬಲೆಯಿಂದ ಇನ್ನೊಂದು ಬಲೆಗೆ ಸುಮಾರು 100 ಮೀಟರ್ ಕನಿಷ್ಟ ಅಂತರವಿರಬೇಕು. 

ಒಂದು ದಿನಕ್ಕೆ ಪ್ರತಿ ಬಲೆಗೆ ಸುಮಾರು 5 ರಿಂದ 10 ಪತಂಗಗಳು ಸತತ 3 ದಿನಗಳ ಕಾಲ ಬಿದ್ದರೆ ಮುಂದಿನ ಒಂದು ವಾರದೊಳಗೆ ಕೀಟನಾಶಕದ ಸಿಂಪರಣೆಯನ್ನು ತೆಗೆದುಕೊಳ್ಳಬೇಕು. ಈ ಲಿಂಗಾಕರ್ಷಕ ನಳಿಕೆಗಳನ್ನು (ಲೂರ್) ಪ್ರತಿ 15 ರಿಂದ 20 ದಿವಸಕೊಮ್ಮೆ ಬದಲಾಯಿಸಬೇಕು. ಈ ಲಿಂಗಾಕರ್ಷಕ ಬಲೆಗಳನ್ನು ಟೊಮ್ಯಾಟೊ ಕಾಯಿಕೊರಕ (ಹೆಲಿಲ್ಯೂರ್) ಮತ್ತು ತಂಬಾಕು ಎಲೆ ತಿನ್ನುವ ಕೀಟಗಳನ್ನು (ಸ್ಪೊಡಾಲೂರ್) ನಿಯಂತ್ರಿಸಲು ಉಪಯೋಗಿಸುತ್ತಾರೆ.

ಇದನ್ನೂ ಓದಿ: 

ಪ್ಲೈ-ಟಿ ಬಲೆ Fly-T traps

ಈ ಬಲೆಯನ್ನು ಹಣ್ಣಿನ ನೊಣಗಳ ನಿಯಂತ್ರಣಕ್ಕೆ ಉಪಯೋಗಿಸುತ್ತಾರೆ. ಇದರಲ್ಲಿ ಬಾಕು-ಲೂರ್ ಎಂಬ ಲಿಂಗಾಕರ್ಷಕವನ್ನು ಹಾಕಿರುತ್ತಾರೆ. ಈ ಬಲೆಯು ಹಳದಿ ಬಣ್ಣದ ಕೆಳಭಾಗ ಮತ್ತು ಬಿಳಿ ಬಣ್ಣದ ಮೇಲ್ಬಾಗ ಹೊಂದಿರುತ್ತದೆ. ಆಕರ್ಷಣೆ ಹೊಂದಿದ ನೊಣಗಳು ಕೆಳಭಾಗದಲ್ಲಿರುವ ರಂಧ್ರದ ಮೂಲಕ ಒಳಗಡೆ ಸೇರಿ ಹೊರಬರಲಾರದೆ ಕೀಟನಾಶಕ ಬೆರೆಸಿದ ನೀರಿನಲ್ಲಿ ಬಿದ್ದು ಸಾಯುತ್ತವೆ.ಗಂಡು ನೊಣಗಳನ್ನು ಆಕರ್ಷಿಸಲು ಸುಮಾರು 2 ರಿಂದ 6 ಬಲೆಗಳನ್ನು ಒಂದು ಎಕರೆ ಹಣ್ಣಿನ ತೋಟ ಹಾಗೂ ಕಲ್ಲಂಗಡಿ, ಸೌತೇಕಾಯಿ ಮುಂತಾದ ಸೌತೆ ಜಾತಿಯ ಬೆಳೆಗಳಲ್ಲಿ ಇಡುವ ಮೂಲಕ ಕೀಟ ನಿಯಂತ್ರಣ ಮಾಡಬಹುದು.

ಇದನ್ನೂ ಓದಿ: ಮಣ್ಣನ್ನು ಮೃಷ್ಟಾನ್ನ ಮಾಡುವ ಎರೆಹುಳು | ಇದು ಕೃಷಿ ಭೂಮಿಯನ್ನು ಫಲವತ್ತು ಮಾಡುವ ಜೈವಿಕ ನೇಗಿಲು

ವೋಟಾ-ಟಿ ಬಲೆ Vota-t trap

ಈ ಬಲೆಯನ್ನು ಬದನೆ ಟೊಂಗೆ ಮತ್ತು ಕಾಯಿಕೊರೆಯುವ ಹುಳುವಿನ ಹತೋಟಿಗೆ ಉಪಯೋಗಿಸುತ್ತಾರೆ. ಇದು ಸಣ್ಣ ಬುಟ್ಟಿ ಆಕಾರದಲ್ಲಿದ್ದು, ಇದರಲ್ಲಿ ನೀರು ಹಾಕಿ ಹೊಲದಲ್ಲಿ ಬಿದುರಿನ ಕಡ್ಡಿಗಳನ್ನಿಟ್ಟು ನಿಲ್ಲಿಸಬೇಕು. ಮೇಲ್ಭಾಗದಲ್ಲಿ ಇಟ್ಟಿರುವ ಲಿಂಗಾಕರ್ಷಕಕ್ಕೆ ಬಂದ ಚಿಟ್ಟೆಗಳು ನೀರಿನಲ್ಲಿ ಬಿದ್ದು ಸಾಯುತ್ತವೆ.

ಕ್ರೂಢಿಕರಿಸುವ ಬಲೆಗಳು 

ತೆಂಗಿನ ಮರಗಳನ್ನು ಕಾಡುವ ಎರಡು ಪ್ರಮುಖ ಕೀಟಗಳಾದ ಕೆಂಪು ಮೂತಿ ಹುಳು ಮತ್ತು ಸುಳಿ ಕೊರೆಯುವ ದುಂಬಿಗಳನ್ನು ಆಕರ್ಷಣೆ ಮಾಡಿ ಸಾಯಿಸಲು ಬಲೆ ಮತ್ತು ಆಕರ್ಷಕಗಳು ಸಿಗುತ್ತವೆ. ಇದನ್ನು ಕೊಕೊ ಬಕೆಟ್ ಎಂದು ಕರೆಯುತ್ತಾರೆ. ಈ ಬಲೆಯ ಕೆಳಗಿನ ಬುಟ್ಟಿಗೆ ಸುಮಾರು 2 ಲೀಟರ್‌ನಷ್ಟು ನೀರು ಮತ್ತು ತೆಂಗಿನ ಕಾಂಡದ ತುಂಡುಗಳನ್ನು ಹಾಕಿ ಇಡಬೇಕು. ಲೂರುಗಳನ್ನು (ಆರ್‌ಪಿಡಬ್ಲು ಲೂರ್ ಮತ್ತು ಆರ್‌ಬಿ ಲೂರ್) ಮುಚ್ಚಳದ ಕೆಳಭಾಗದಲ್ಲಿಟ್ಟಿರುತ್ತಾರೆ.

ಆಕರ್ಷಣೆಗೊಂಡ ಹೆಣ್ಣು ಹುಳುಗಳು ಬಕೇಟಿನ ಸುತ್ತಲೂ ಇರುವ ರಂಧ್ರಗಳ ಮುಖಾಂತರ ಒಳ ಬಂದು ನೀರಿನಲ್ಲಿ ಬಿದ್ದು ಸಾಯುತ್ತವೆ. ಈ ಬಲೆಯನ್ನು ಮರದ ಕಾಂಡದ ಮೇಲೆ ಭೂಮಿಯಿಂದ 5 ಅಡಿ ಎತ್ತರದಲ್ಲಿ ಕಟ್ಟಬೇಕು ಮತ್ತು ಎಕರೆವೊಂದಕ್ಕೆ ಒಂದು ಬಲೆ ಸಾಕು. 

| ಮನ್ಸೂರ ಮತ್ತು ಬದರಿಪ್ರಸಾದ್ ಪಿ. ಆರ್, ಕೃಷಿ ಮಹಾವಿದ್ಯಾಲಯ, ಗಂಗಾವತಿ

ಇದನ್ನೂ ಓದಿ: ವೀಳ್ಯದೆಲೆ ಬೇಸಾಯ: 10 ಗುಂಟೆ ಜಾಗದಲ್ಲಿ 3 ಲಕ್ಷ ರೂಪಾಯಿ ಆದಾಯ Betel Leaf Farming Veelyadele Krishi

WhatsApp - 1 WhatsApp - 2 WhatsApp - 3 Join Telegram