ಈ ಲಕ್ಷಣಗಳು ಇದ್ದರೆ ಮಾತ್ರ ಅದು ಶುದ್ಧ ಬಂಡೂರು ಕುರಿ Pure Bandur Sheep Characteristics

ವಿಶ್ವಪ್ರಸಿದ್ಧ ಕುರಿ ತಳಿಯಾದ ನಮ್ಮ ಕನ್ನಡ ನೆಲದ ಬಂಡೂರು ಕುರಿ ಹೇಗಿರುತ್ತದೆ ಮತ್ತು ಅದರ ಲಕ್ಷಣಗಳೇನು? ಯಾವ ಲಕ್ಷಣದ ಆಧಾರದ ಮೇಲೆ ಅದು ನಿಜವಾದ ಬಂಡೂರು ಕುರಿ ಎಂದು ಗುರುತಿಸುವುದು? ಸಂಪೂರ್ಣ ಮಾಹಿತಿ ಇಲ್ಲಿದೆ...

Sep 26, 2024 - 20:20
Sep 26, 2024 - 20:53
WhatsApp - 1 WhatsApp - 2 WhatsApp - 3 Join Telegram

ಈ ಲಕ್ಷಣಗಳು ಇದ್ದರೆ ಮಾತ್ರ ಅದು ಶುದ್ಧ ಬಂಡೂರು ಕುರಿ Pure Bandur Sheep Characteristics

Kannada Mitra - News Desk.

ಮಾಂಸದ ಗುಣಮಟ್ಟಕ್ಕೆ ಇಡೀ ವಿಶ್ವದಲ್ಲಿಯೇ ಬಂಡೂರು ಕುರಿ (World Famous Bandur Sheep Breed) ಹೆಸರುವಾಸಿಯಾಗಿದೆ. ಇದರ ಪರಿಮಳಯುಕ್ತ ಮಾಂಸದ ರುಚಿಯು ಮಾಂಸಾಹಾರಿಗಳ ಬಾಯಲ್ಲಿ ನೀರೂರಿಸುತ್ತದೆ. ಬಂಡೂರು ಕುರಿ ತಳಿಯು ವಿಶ್ವದ ಕುರಿ ಪ್ರಬೇಧಗಳಲ್ಲಿಯೇ ಅತ್ಯಂತ ಚೆಲುವಾದ ಮೈಮಾಟವನ್ನು ಹೊಂದಿದ್ದು; ನೋಡುಗರ ಕಣ್ಣು ಸೆಳೆಯುವುದಲ್ಲದೇ, ಮನಸ್ಸನ್ನು ಬಹು ಬೇಗನೇ ಗೆದ್ದುಕೊಂಡು ಬಿಡುತ್ತದೆ.

ಗಿಡ್ಡವಾದ ಕಾಲುಗಳು, ಉಂಡೆಯಾಕಾರದ ಉದ್ದನೆಯ ಶರೀರ, ವಿಶಾಲವಾದ ಎದೆಯ ಭಾಗ, ತುಸು ಉಬ್ಬಿದ ರೋಮನ್ ಮೂಗು, ಚೆಲುವಾದ ಬಿಳಿಯ ಮುಖ, ಚಿಕ್ಕದಾದ ಕಿವಿಗಳು, ಜೋಡಿ ಕೊರಳುಗಂಟೆ ಹಾಗೂ ಹುಲಿಯ ನಡಿಗೆಯನ್ನು ಹೋಲುವ ಚಲನವಲನಗಳು, ಗಟ್ಟಿಮುಟ್ಟಾದ ಒನಕೆ ತುಂಡಿನಂತಹ ಕಾಲುಗಳು, ಫಳಪಳ ಹೊಳೆಯುವ ಕಣ್ಣುಗಳು... ಹೀಗೆ ಬಂಡೂರು ಕುರಿಯು ತನ್ನ ವಿಶಿಷ್ಠ ವಿನ್ಯಾಸ ಮತ್ತು ಚೆಲುವಿನಿಂದ ಇತರ ಕುರಿಗಳ ಮಧ್ಯೆದಲ್ಲಿಯೂ ತಟ್ಟನೇ ಗುರುತಿಸುವಂತಹ ಲಕ್ಷಣಗಳನ್ನು ಹೊಂದಿದೆ.

ಹುಲಿಯ ರಾಜಗಾಂಭೀರ್ಯದ ನಡಿಗೆ

ಅತ್ಯಂತ ಕಾಳಜಿ ಮತ್ತು ಗುಣಮಟ್ಟದ ಕೈತಿಂಡಿಯನ್ನು ನೀಡಿ ಬೆಳೆಸಿದರೆ ಬಂಡೂರು ಗಂಡು ಕುರಿ (ಟಗರು) 32 ಕೆ.ಜಿಯಿಂದ 42 ಕೆ.ಜಿಯ ವರೆಗೂ ತೂಕವನ್ನು ಗಳಿಸುತ್ತದೆ. ಸಮೃದ್ಧವಾಗಿ ಬೆಳೆದು ನಿಂತ ಒಂದು ವರ್ಷ ವಯಸ್ಸಿನ ಬಂಡೂರು ಟಗರಿನ ನಡಿಗೆಯು ಹುಲಿಯ ರಾಜಗಾಂಭೀರ್ಯದ ನಡಿಗೆಯನ್ನು ನೆನಪಿಸುತ್ತದೆ.

ಶುದ್ಧ ಬಂಡೂರು ಟಗರಿಗೆ ಕೊಂಬುಗಳು ಇರುವುದಿಲ್ಲ. ಪೂರ್ಣವಾಗಿ ಬೆಳೆದ ಟಗರು ನೋಡಲು ದಷ್ಟಪುಷ್ಟವಾಗಿ ಬಿರುಸಿನ ಚಲನವಲನ ಹೊಂದಿದ್ದರೂ ಅವು ಗುದ್ದುವುದಿಲ್ಲ. ಹೆಂಗಸರು ಮಕ್ಕಳು ಕೂಡ ಇವುಗಳನ್ನು ನಿರ್ವಹಣೆ ಮಾಡಬಹುದು.

ಬಂಡೂರು ಕುರಿ, ಟಗರುಗಳನ್ನು ಅವುಗಳ ಪೂರ್ಣ ಲಕ್ಷಣಗಳೊಂದಿಗೆ ಸ್ಪಷ್ಟವಾಗಿ ಗುರುತಿಸಲು ಕನಿಷ್ಠ ನಾಲ್ಕೂವರೆ ತಿಂಗಳಿಂದ ಐದೂವರೆ ತಿಂಗಳಷ್ಟಾದರೂ ಮರಿಗಳಿಗೆ ವಯಸ್ಸು ತುಂಬಿರಬೇಕು. ಏಕೆಂದರೆ ಹುಟ್ಟಿದ 2ರಿಂದ 3 ತಿಂಗಳಿನ ಎಲ್ಲಾ ಕುರಿ ಮರಿಗಳು ಸಾಮಾನ್ಯವಾಗಿ ಒಂದೇ ತೆರನಾಗಿ ಇರುತ್ತವೆ. 

ಕೊಳ್ಳುವಾಗ ಮೋಸ ಹೋಗಬೇಡಿ...

ಕಿರುಗಾವಲು, ಮಳವಳ್ಳಿ, ಟಿ. ನರಸೀಪುರದ ಸಂತೆಗಳಲ್ಲಿ ಎರಡೂವರೆಯಿಂದ ಮೂರು ತಿಂಗಳ ಕುರಿಮರಿಗಳಿಗೆ ಹೊಟ್ಟೆಯ ಸುತ್ತಲೂ ತುಪ್ಪಟ ಕತ್ತರಿಸಿ, ಹೊಟ್ಟೆ ತುಂಬಾ ಹುರುಳಿ ನೀರು ಕುಡಿಸಿ, ಕಣ್ಣಿಗೆ ಕಾಡಿಗೆ ಬಣ್ಣ ಹಚ್ಚಿ ಗಿಲೀಟು ಮಾಡಿ ಇದೇ ಬಂಡೂರು ಕುರಿ ಮರಿಗಳೆಂದು ಇಂದಿಗೂ ಕೆಲವು ದಲ್ಲಾಳಿಗಳು, ಮೋಸದ ಮಾರಾಟಗಾರರು ಕೊಳ್ಳುವವರಿಗೆ ಯಾಮಾರಿಸುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ಹೊಸದಾಗಿ ಬಂಡೂರು ಕುರಿ ಸಾಕಬೇಕೆನ್ನುವವರು ಸಂತೆಗಳಲ್ಲಿ ಕೊಳ್ಳುವುದಕ್ಕಿಂತ ಅನುಭವಿ ಕುರಿ ಸಾಕಾಣಿಕೆದಾರರಿಂದಲೇ ನೇರವಾಗಿ ಕೊಳ್ಳುವುದು ಸೂಕ್ತ.

ಸಾಮಾನ್ಯವಾಗಿ ಬಂಡೂರು ಹೆಣ್ಣು ಕುರಿಗಳು 9 ರಿಂದ 12-13 ತಿಂಗಳಲ್ಲಿ ಪ್ರಾಯಕ್ಕೆ ಬರುತ್ತವೆ ಮತ್ತು ಗರ್ಭಧರಿಸಿ ಮರಿಗಳನ್ನು ಕೊಡಲು ಪ್ರಾರಂಭಿಸುತ್ತವೆ. ಬಂಡೂರು ಹೆಣ್ಣು ಕುರಿಗಳು ಕೂಡ ಗಿಡ್ಡ ಕಾಲನ್ನು, ಉಂಡೆಯಾದ ಶರೀರವನ್ನು ಹೊಂದಿದ್ದರೂ ಶುದ್ಧ ಬಂಡೂರು ಟಗರಿನಂತಹ ನೀಳದೇಹ ರಚನೆಯನ್ನಾಗಲೀ, ಆಕರ್ಷಕ ಹುಲಿಯ ರೀತಿಯ ನಡಿಗೆಯನ್ನಾಗಲೀ ಹೊಂದಿರುವುದಿಲ್ಲ. ಹೊಸದಾಗಿ ಬಂಡೂರು ಕುರಿಗಳನ್ನು ಕೊಳ್ಳುವವರು ಮುಖ್ಯವಾಗಿ ಈ ಕೆಳಕಂಡ ಲಕ್ಷಣಗಳನ್ನು ಗಮನಿಸಿ ಕುರಿಗಳನ್ನು ಕೊಂಡುಕೊಳ್ಳುವುದು ಉತ್ತಮ.

ಗಿಡ್ಡ ಕಾಲುಗಳು: ಮುಂಗಾಲು ಹಿಂಗಾಲಿಗಿಂತ ಗಿಡ್ಡವಾಗಿರುತ್ತವೆ. ಹಿಂಭಾಗ ತುಸು ಎತ್ತರವಾಗಿದ್ದು; ತಲೆಯ ಕಡೆಗೆ ಇಳಿಜಾರು ಇರುತ್ತದೆ. ಸೊಂಟದ ಮಧ್ಯೆ ಭಾಗ ತುಸು ತಗ್ಗಿದಂತೆ ಕಂಡು ಬರುತ್ತದೆ.

ಕೊಂಬುಗಳು: ಮೊದಲೇ ಹೇಳಿದಂತೆ ಶುದ್ಧ ಬಂಡೂರು ಟಗರಿಗೆ ಕೊಂಬುಗಳು ಇರುವುದಿಲ್ಲ. ಒಮ್ಮೊಮ್ಮೆ ಕೆಲವು ಟಗರುಗಳಿಗೆ ಹಾಲಿಗೊಂಬು ಇರುತ್ತವೆಯಾದರೂ ಅವು ಗಡುಸಾಗಿರುವುದಿಲ್ಲ ಮತ್ತು ಕ್ರಮೇಣ ಮುರಿದು ಹೋಗುತ್ತವೆ.

ವಿಶಾಲವಾದ ಎದೆ ಭಾಗ: ಬಂಡೂರು ಟಗರು ಹೆಣ್ಣು ಕುರಿಗಳಿಗಿಂತ ಹೆಚ್ಚು ವಿಶಾಲವಾದ ಎದೆಯ ಭಾಗವನ್ನು ಹೊಂದಿದ್ದು; ಒಂದೂವರೆ ಅಡಿ ಅಗಲವಾಗಿರುತ್ತದೆ. ಮುಂಗಾಲುಗಳು ಸದೃಢವಾಗಿರುತ್ತವೆ.

ನೀಳವಾದ ಶರೀರ: ಬಂಡೂರು ಕುರಿಗಳು ಇತರೆ ಕುರಿಗಳಿಗಿಂತ ನೀಳವಾದ ಶರೀರ ರಚನೆಯನ್ನು ಹೊಂದಿರುತ್ತವೆ. ಸಾಮಾನ್ಯವಾಗಿ 3ರಿಂದ 4 ಅಡಿಗಳ ವರೆಗೂ ವಯಸ್ಕ ಟಗರು ಇರುತ್ತವೆ. ಹೆಣ್ಣುಕುರಿ ಎರಡೂವರೆ ಅಡಿಯಿಂದ 3 ಅಡಿ ಉದ್ದವಾದ ದೇಹ ರಚನೆಯನ್ನು ಹೊಂದಿರುತ್ತದೆ.

ಬಿಳಿ ಮುಖ: ಸುಂದರವಾದ ಬಿಳಿ ಮುಖವನ್ನು ಹೊಂದಿದ್ದು; ಕಿವಿ ಮತ್ತು ಕತ್ತಿನ ಭಾಗದಲ್ಲಿ ತಿಳಿಯಾದ ಕಂದು ಬಣ್ಣವನ್ನು ಹೊಂದಿರುತ್ತವೆ.

ವಯಸ್ಕ ಟಗರಿಗೆ ಮೂಗಿನ ಮೇಲೆ ಗೆರೆಗಳು: ಸಂತಾನೋತ್ಪತ್ತಿಗೆ ಸಿದ್ಧವಾಗಿರುವ ಪ್ರೌಢ ವಯಸ್ಸಿನ ಟಗರಿನ ಮೂಗಿನ ಮೇಲೆ 3ರಿಂದ 4 ಅಡ್ಡಗೆರೆಗಳು ರಚನೆಯಾಗಿರುತ್ತವೆ. ಬೆದೆಗೆ ಬಂದ ಹೆಣ್ಣು ಕುರಿಗಳನ್ನು ಕಂಡಾಗ ಮೇಲ್ದುಟಿಯನ್ನು ಎತ್ತಿಕೊಂಡು ಗುರ್... ಎನ್ನುವ ಸದ್ದಿನೊಂದಿಗೆ ಮುಂಗಾಲುಗಳಿಂದ ನೆಲವನ್ನು ಕೆರೆಯುತ್ತದೆ. 

ಅಲ್ಲದೆ ಬೆದೆಗೆ ಬಂದಿರುವ ಕುರಿಗಳನ್ನು ಮಾತ್ರ ಹತ್ತಲು ತವಕಿಸುತ್ತದೆ. ಇಂತಹ ಲಕ್ಷಣಗಳನ್ನು ಹೊಂದಿರುವ ಟಗರುಗಳನ್ನು ಚಾಣಾಕ್ಷ ಕುರಿಗಾರರು ಬಿತ್ತನೆಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅವುಗಳಿಗೆ ‘ಕಟ್ಟಗರು’ ಎಂದು ಕರೆಯುತ್ತಾರೆ.

ಹೆಣ್ಣುಕುರಿಗಳು: ಮರಿ ಹಾಕಿರದ ಹೆಣ್ಣು ಕುರಿಗಳನ್ನು ‘ಕರಗಿ’ ಎಂದು ಕರೆಯುತ್ತಾರೆ. ಇವು ಟಗರುಗಳಷ್ಟು ಉತ್ತಮ ಮೈಮಾಟ ಹೊಂದಿಲ್ಲದಿದ್ದರೂ ಗಿಡ್ಡವಾದ ಕಾಲುಗಳು, ಉಂಡೆಯಾಕಾರದ ದೇಹ ರಚನೆ, ಹೃದಯದಾಕಾರದ ತುಸು ಅಗಲವಾದ ಎದೆಭಾಗವನ್ನು ಹೊಂದಿರುತ್ತವೆ. ಚುರುಕು, ಚಂಚಲ ನೋಟವನ್ನು ಹೊಂದಿದ್ದು; ಆರೋಗ್ಯಯುತವಾದ ಕುರಿಗಳ ಕಣ್ಣುಗಳು ಕಾಂತಿಯುಕ್ತವಾಗಿರುತ್ತವೆ.

ಜೋಡಿ ಕೊರಳಗಂಟೆ: ಶುದ್ಧವಾದ ಬಂಡೂರು ಕುರಿಯ ಗುರುತಿಸುವಿಕೆಯ ಲಕ್ಷಗಳಲ್ಲಿ ಕುರಿಯ ಚೆಲುವಿಗೆ ಕಾರಣವಾಗಿರುತ್ತವೆ. ಕೆಲವೊಮ್ಮೆ ಕೊರಳು ಮೊಲೆ ಇಲ್ಲದಿದ್ದರೆ ಜೋಡಿ ಕಣ್ಣುಗಳನ್ನು ಕೊರಳು ಗಂಟೆಯ ಭಾಗದಲ್ಲಿ ಹೊಂದಿರುತ್ತವೆ.

ಪೂರಕ ಮಾಹಿತಿ: ಪಿ. ರಮೇಶ್ ರಂಗಸಮುದ್ರ

WhatsApp - 1 WhatsApp - 2 WhatsApp - 3 Join Telegram

Tags: