BV380 Egg Poultry-ವರ್ಷವಿಡಿ ಮೊಟ್ಟೆ ಹಾಕುವ ಕೋಳಿ ಸಾಕಾಣಿಕೆಯಿಂದ ಭರ್ಜರಿ ಆದಾಯ | ಸಾಕಾಣಿಕೆಯ ಸೂತ್ರಗಳು ಇಲ್ಲಿವೆ...
ಬಿವಿ 380 ವರ್ಷಕ್ಕೆ 280 ಮೊಟ್ಟೆಯನ್ನು ಇಡುವಂತಹ ಕೋಳಿ ತಳಿಯಾಗಿದ್ದು; ಎಚ್ಚರಿಕೆಯಿಂದ ಸಾಕಾಣಿಕೆ ಮಾಡಿದರೆ ಹೆಚ್ಚಿನ ಆದಾಯ ನಿಶ್ಚಿತ. ಈ ಕೋಳಿಯ ಉತ್ತಮ ಗುಣಮಟ್ಟದ ಮರಿ ಎಲ್ಲಿ ಸಿಗುತ್ತದೆ? ಮೊಟ್ಟೆ ಮಾರುಕಟ್ಟೆ ಹೇಗೆ? ಆಹಾರ ಪೂರೈಕೆ, ಸಾಕಾಣಿಕೆ ಕ್ರಮ ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ...
WhatsApp - 1 | WhatsApp - 2 | WhatsApp - 3 | Join Telegram |

Kannada Mitra - News Desk.
ಬಿವಿ 380 ತಳಿ ಕೋಳಿಯನ್ನು (BV380 Egg Poultry) ವೆಂಕಟೇಶ್ವರ ಹ್ಯಾಚರೀಸ್ ಅಭಿವೃದ್ಧಿಪಡಿಸಿದ್ದು ಕೇರಳದ ಅಭಿಲಾಶ್ ಹ್ಯಾಚರೀಸ್ ಅವರು ಇದನ್ನು ಪೇಟೆಂಟ್ ಪಡೆದುಕೊಂಡು ಮರಿಯನ್ನು ಮಾಡಿಸಿ ರೈತರಿಗೆ ನೀಡುತ್ತಿದ್ದಾರೆ. ಬಿವಿ 380 ಮೊಟ್ಟೆ ಇಡುವಂತಹ ಕೋಳಿಯನ್ನು ಬಿವಿ 380 ತಾಯಿ ಕೋಳಿಯಿಂದ (parent birds) ಅಭಿವೃದ್ಧಿಪಡಿಸಲಾಗುತ್ತದೆ. ಮೊದಲನೆಯದಾಗಿ ಕರ್ನಾಟಕದಲ್ಲಿ ಉತ್ತಮವಾದ ಕೋಳಿ ತಳಿ ಸಿಗುತ್ತಿಲ್ಲ.
ಆದರೆ ಇಲ್ಲಿ ಕೆಲ ಮರಿ ಉತ್ಪಾದನಾ ಘಟಕಗಳು ಮರಿಯನ್ನು ತಂದು ಅದರಲ್ಲಿ ಬಂದಂತಹ ಗಂಡು-ಹೆಣ್ಣನ್ನು ಸಾಕಾಣಿಕೆ ಮಾಡಿ ಮರಿ ಮಾಡಿಸಿ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಅದೆಷ್ಟೋ ರೈತರು ಸಣ್ಣ ಪ್ರಮಾಣದಲ್ಲಿ ಬಿವಿ 380 ಮೊಟ್ಟೆ ಕೋಳಿ ಸಾಕಾಣಿಕೆಯನ್ನು ಮಾಡಿ ಸಂಕಷ್ಟಕ್ಕೆ ಒಳಗಾಗಿದ್ದು ಅನೇಕ ಕಾರಣದಿಂದ ಕೋಳಿ ಸಾಕಾಣಿಕೆಯನ್ನು ನಿಲ್ಲಿಸುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವಾರು...
ಲಾಭ-ನಷ್ಟದ ಲೆಕ್ಕಾಚಾರ
ಬಿವಿ 380 ವರ್ಷಕ್ಕೆ 280 ಮೊಟ್ಟೆಯನ್ನು ಇಡುವಂತಹ ಕೋಳಿ ತಳಿ. ಕಳಪೆ ಗುಣಮಟ್ಟದ ಮರಿ ಉತ್ಪಾದನೆ ಮಾಡುವುದರಿಂದ 170 ರಿಂದ 180 ಮೊಟ್ಟೆ ಮಾತ್ರ ಇಡುತ್ತದೆ. ಇಂತಹ ಕಳಪೆ ಗುಣಮಟ್ಟದ ಕೋಳಿ ಮರಿಯನ್ನು ತಂದು ಸಾಕಾಣಿಕೆ ಮಾಡಿದರೆ ನಷ್ಟ ಗ್ಯಾರಂಟಿ. ಹೀಗಾಗಿ ಬಿವಿ 380 ಕೋಳಿ ಪೇಟೆಂಟ್ ಪಡೆದ ಮರಿ ಉತ್ಪಾದನಾ ಘಟಕದಿಂದ ಉತ್ತಮ ಗುಣಮಟ್ಟದ ಮರಿ ತಂದು ಸಾಕಾಣಿಕೆ ಮಾಡುವುದು ಉತ್ತಮ.
ಬಿವಿ 380 ಕೋಳಿಯು ವರ್ಷಕ್ಕೆ 280 ಮೊಟ್ಟೆ ಇಟ್ಟರೆ ಒಂದು ದಿನಕ್ಕೆ ಒಂದು ಮೊಟ್ಟೆಯ ಮೇಲೆ 50 ಪೈಸೆಯಿಂದ ಒಂದು ರೂಪಾಯಿ ಲಾಭ ಗಳಿಸುವುದೇ ಕಷ್ಟವಾಗಿರುತ್ತದೆ. ಅಂಥದರಲ್ಲಿ ಒಂದು ವರ್ಷಕ್ಕೆ 170-180 ಮೊಟ್ಟೆ ಇಟ್ಟರೆ ರೈತರಿಗೆ ಲಾಭ ಎಲ್ಲಿ ಬರುತ್ತದೆ? ಕನಿಷ್ಠ ಸಂಬಳ ಸಿಗುವುದೇ ಕಷ್ಟಕರವಾಗುತ್ತದೆ. ಇಂತಹ ನಷ್ಟದ ಕಾರಣಕ್ಕೆ ಬಿವಿ 380 ಮೊಟ್ಟೆ ಕೋಳಿ ಸಾಕಾಣಿಕೆ ಘಟಕವನ್ನು ಮುಚ್ಚಲಾಗುತ್ತಿದೆ.
ಇಲ್ಲಿ ಕೆಲ ರೈತರು ಏನು ಮಾಡುತ್ತಾರೆ ಎಂದರೆ ಬಿವಿ 380 ಮೊಟ್ಟೆ ಕೋಳಿಗೆ ಕೊಡುವಂತಹ ಸಮತೋಲನ ಆಹಾರವನ್ನು ಪಶು ಆಹಾರದ ಅಂಗಡಿಗಳಲ್ಲಿ ಕೊಂಡುಕೊಳ್ಳುತ್ತಾರೆ. ಬೆಲೆ ಹೆಚ್ಚಾಗುತ್ತದೆ. ಮೊಟ್ಟೆ ಕೋಳಿಗಳಿಗೆ ರೈತರು ಸ್ವತಃ ಆಹಾರವನ್ನು ತಯಾರಿಸಿಕೊಂಡರೆ ಸ್ವಲ್ಪ ಮಟ್ಟದಲ್ಲಿ ಆದಾಯವನ್ನು ಪಡೆಯಬಹುದು. ಆದರೆ ಸಣ್ಣ ಪ್ರಮಾಣದಲ್ಲಿ ಆಹಾರವನ್ನು ತಯಾರಿಸಿಕೊಳ್ಳಲು ಆಗುವುದಿಲ್ಲ.
ಏಕೆಂದರೆ ಬಂಡವಾಳ ಹೆಚ್ಚು ಬೇಕಾಗುತ್ತದೆ. ಅಲ್ಲದೆ ಸ್ವಲ್ಪ ಪ್ರಮಾಣದಲ್ಲಿ ತಯಾರಿಸಿ ಕೊಳ್ಳುವುದಾದರೆ ಆಹಾರ ತಯಾರಿಸಲು ಬೇಕಾದಂತಹ ಕಚ್ಚಾವಸ್ತುಗಳ ಪೂರೈಕೆ ಮಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಕಚ್ಚಾವಸ್ತುಗಳು ಸಿಗುವುದಿಲ್ಲ. ಇದು ಒಂದು ಸಮಸ್ಯೆಯಾಗಿದೆ.
ಸಮತೋಲನ ಆಹಾರದ ನೀಡಿ
ಬಿವಿ 380 ಕೋಳಿಗೆ ಕೊಡುವಂತಹ ಆಹಾರದಲ್ಲಿ ಸಮತೋಲನ ಆಹಾರ ಕೊಡುತ್ತಿಲ್ಲ. ಪಶು ಆಹಾರ ಮಾರಾಟ ಮಾಡುವ ಅಂಗಡಿಯಲ್ಲಿ ಮೊಟ್ಟೆ ಕೋಳಿಯ ಆಹಾರ ತಂದು ಅದರ ಜೊತೆಗೆ ಅಜೋಲಾ, ಹುಲ್ಲು, ತರಕಾರಿ, ಜೋಳವನ್ನು ಪುಡಿ ಮಾಡಿ ಕೊಡುವುದನ್ನು ಕೆಲ ರೈತರು ಮಾಡುತ್ತಿದ್ದಾರೆ. ಹೀಗೆ ಮಾಡಿದಾಗ ಕೋಳಿಗೆ ಬೇಕಾದಂತಹ ಸಮತೋಲನ ಆಹಾರ ಪೂರೈಕೆ ಆಗುವುದಿಲ್ಲ. ಆಗ ಮೊಟ್ಟೆ ಉತ್ಪಾದನೆ ಕುಂಠಿತವಾಗುತ್ತದೆ. ಬಿವಿ 380 ಕೋಳಿಗೆ ಆಹಾರ ಪೂರೈಕೆಯಿಂದ ನಷ್ಟವಾಗಬಹುದು.
ಆಹಾರದ ಜೊತೆಗೆ ಬೇರೆ ಪದಾರ್ಥವನ್ನು ಮಿಶ್ರಣ ಮಾಡಲು ಮುಂದಾಗುತ್ತಾರೆ. ಮಿಶ್ರಣ ಮಾಡಿ ಕೋಳಿಗೆ ನೀಡುತ್ತಾರೆ. ಅದರ ಪರಿಣಾಮ ಒಂದೇ ಸಲ ಗೊತ್ತಾಗುವುದಿಲ್ಲ. ಕ್ರಮೇಣ ಗೊತ್ತಾಗುತ್ತದೆ. ಮೊಟ್ಟೆ ಇಡಲು ರೆಡಿ ಇರುವ ಕೋಳಿ ತಂದು 2 ರಿಂದ 3 ತಿಂಗಳಿಗೆ ಇಂತಹ ಸನ್ನಿವೇಶವನ್ನು ಮಾಡಿಕೊಂಡು ಮೊಟ್ಟೆ ಕೋಳಿ ಸಾಕಾಣಿಕೆ ನಷ್ಟ ಎಂದು ನಿಲ್ಲಿಸುತ್ತಿದ್ದಾರೆ.
ಮೊಟ್ಟೆ ಇಡುವ ಒಂದು ಕೋಳಿ ದಿನನಿತ್ಯ 110 ರಿಂದ 120 ಗ್ರಾಂ ಆಹಾರ ಬೇಕಾಗುತ್ತದೆ. ಇದರಲ್ಲಿ ಮೊಟ್ಟೆ ಇಡಲು ಬೇಕಾದಂತಹ ಪ್ರಮಾಣದಲ್ಲಿ ಸಮತೋಲನ ಆಹಾರ ಇರುತ್ತದೆ. ಅಂತಹ ಆಹಾರವನ್ನು ಕೋಳಿಗಳಿಗೆ ನೀಡಬೇಕಾಗುತ್ತದೆ. ಆದರೆ ಇದರಲ್ಲಿ ಕೆಲವರು ಕೆಲವು ಪದಾರ್ಥಗಳನ್ನು ಮಿಶ್ರಣ ಮಾಡುತ್ತಾರೆ. ಇದರಿಂದ ಆಹಾರದಲ್ಲಿ ಖನಿಜಾಂಶಗಳ ಸಮತೋಲನ ಕಡಿಮೆಯಾಗುತ್ತದೆ. ಇಂತಹ ಮಿಶ್ರಣದಿಂದ ಮೊಟ್ಟೆ ಉತ್ಪಾದನೆಯಲ್ಲಿ ಕುಂಠಿತಗೊಳಿಸುತ್ತದೆ.
ಆಹಾರದ ಪೂರೈಕೆ ಕೊರತೆ
ಇನ್ನೊಂದು ಕೊರತೆ ಏನೆಂದರೆ ನಮ್ಮ ರಾಜ್ಯದಲ್ಲಿ ಎಲ್ಲಾ ಜಿಲ್ಲೆಯ ತಾಲ್ಲೂಕು, ನಗರಗಳಲ್ಲಿ ಮೊಟ್ಟೆ ಕೋಳಿಗಳಿಗೆ ಕೊಡುವಂತಹ ಸಿದ್ಧವಾದ ಆಹಾರ ಪೂರೈಕೆ ಮಾಡಲು ಆಗುತ್ತಿಲ್ಲ. ಏಕೆಂದರೆ ಆಹಾರ ತಯಾರಿಸುವಂತಹ ಮಿಲ್ಲುಗಳಲ್ಲಿ ಸಣ್ಣ ಪ್ರಮಾಣದಲ್ಲಿ ಆಹಾರ ತಯಾರಿಸಲು ಸಾಧ್ಯವಾಗುತ್ತಿಲ್ಲ.
ಇವೆಲ್ಲ ದೊಡ್ಡ ಮಿಲ್ಲುಗಳಾಗಿದ್ದು ಒಂದು ಸಲ 6 ರಿಂದ 10 ಟನ್ ಆಹಾರ ಮಿಶ್ರಣ ಮಾಡುವುದಿದೆ. ಹಾಗಾಗಿ ಪಶು ಆಹಾರದ ಅಂಗಡಿಗಳಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಶೇಖರಣೆ ಮಾಡಲು ಆಗುವುದಿಲ್ಲ ಹಾಗೂ ಮಾರುಕಟ್ಟೆ ಇಲ್ಲದಿರುವುದರಿಂದ ಮೊಟ್ಟೆಕೋಳಿ ಆಹಾರವನ್ನು ಮಾರಾಟ ಮಾಡುತ್ತಿಲ್ಲ. ಕೆಲವು ಕಡೆ ಮಾತ್ರ ಸಿಗುತ್ತದೆ.
ಕೆಲ ರೈತರು ಮೊಟ್ಟೆ ಕೋಳಿ ಆಹಾರ ಮಾರುಕಟ್ಟೆಯಲ್ಲಿ ಸರಾಗವಾಗಿ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ವಿಚಾರಣೆ ಮಾಡದೆ ಬಿವಿ 380 ಕೋಳಿ ಸಾಕಾಣಿಕೆ ಮಾಡಲು ಆರಂಭಿಸುತ್ತಾರೆ. ನಂತರದಲ್ಲಿ ಆಹಾರದ ಪೂರೈಕೆ ಕೊರತೆಯಿಂದ ಇರುವಂತಹ ಕೋಳಿಯ ಜಾಲರಿ ಮತ್ತು ಕೋಳಿಯನ್ನು ತಂದAತಹ ಬೆಲೆಯಿಂದ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾವಿರಾರು ರೈತರು ನಷ್ಟ ಅನುಭವಿಸಿದ್ದಾರೆ.
ಒಂದು ದಿನದ ಮರಿಯಿಂದ ಸಾಕಾಣಿಕೆ ಮಾಡಿ
ಬಿವಿ 380 ಕೋಳಿ ಸಾಕಾಣಿಕೆಯನ್ನು ಮರಿಯಿಂದ ಪ್ರಾರಂಭ ಮಾಡಿದರೆ ಕೋಳಿಮರಿಯು ನಿಮ್ಮ ವಾತಾವರಣಕ್ಕೆ ಹೊಂದಿಕೊಂಡು ಸಮಯ ಸಂದರ್ಭಕ್ಕೆ ಮೊಟ್ಟೆ ಇಡಲು ಪ್ರಾರಂಭವಾಗುತ್ತದೆ. ಇಲ್ಲಿ ಕೆಲ ರೈತರು ಏನು ಮಾಡುತ್ತಾರೆ ಎಂದರೆ ದೊಡ್ಡ ಕೋಳಿಯನ್ನು ತಂದು ಸಾಕಾಣಿಕೆ ಮಾಡಲು ಮುಂದಾಗುತ್ತಿದ್ದಾರೆ.
ಕೋಳಿಯು ನಿಮ್ಮ ವಾತಾವರಣಕ್ಕೆ ಬಂದು ಹೊಂದಿಕೊಳ್ಳಲು ಒಂದರಿಂದ ಒಂದೂವರೆ ತಿಂಗಳು ಸಮಯ ಪಡೆದುಕೊಳ್ಳುತ್ತದೆ. ಕೆಲವು ಸತ್ತು ಹೋಗುತ್ತವೆ. ಕೆಲವು ದೇಹದ ಗಾತ್ರ ಕಡಿಮೆ ಮಾಡಿಕೊಳ್ಳುತ್ತವೆ. ಈ ವಿಚಾರವನ್ನು ಸೂಕ್ಷ್ಮವಾಗಿ ತಿಳಿದಾಗ ಮಾತ್ರ ಗೊತ್ತಾಗುತ್ತದೆ.
ಗಮನಾರ್ಹವೆಂದರೆ ದೊಡ್ಡ ದೊಡ್ಡ ಕೋಳಿ ಸಾಕಾಣಿಕೆ ಘಟಕಗಳು ಹುಟ್ಟಿದ ಮರಿಯನ್ನು ತಂದು ಸಾಕಾಣಿಕೆ ಮಾಡುತ್ತಾರೆ. ದೊಡ್ಡ ಕೋಳಿಗಳು ತಂದು ಸಾಕಾಣಿಕೆ ಮಾಡುವುದಿಲ್ಲ. ಇವುಗಳೆಲ್ಲವೂ ಮೊಟ್ಟೆ ಉತ್ಪಾದನೆಯಲ್ಲಿ ಕುಂಠಿತಗೊಳ್ಳಲು ಆಗುವಂತ ಕಾರಣಗಳು. ಹಾಗಾಗಿ ಹುಟ್ಟಿದ ಒಂದು ದಿನದ ಮರಿಯಿಂದ ಸಾಕಾಣಿಕೆ ಮಾಡುವುದು ಉತ್ತಮ.
ಹುಟ್ಟಿದ ಮರಿ ತಂದು ಸಾಕಾಣಿಕೆ ಮಾಡಿದರೆ ಒಂದು ಬಿವಿ 380 ಕೋಳಿಯ ಮೇಲೆ 250 ರೂಪಾಯಿ ಖರ್ಚು ಬರುವ ಸಾಧ್ಯತೆ ಇದೆ. ದೊಡ್ಡ ಕೋಳಿ ತಂದರೆ ನಿಮಗೆ ಬರುವ ಲಾಭವನ್ನು ಅವರಿಗೆ ಕೊಟ್ಟು ಬರಬೇಕಾಗುತ್ತದೆ. ಕೆಲ ರೈತರು ನಮಗೆ ಐವತ್ತು-ನೂರು ಕೋಳಿ ತರಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ. 8 ರಿಂದ 10 ರೈತರು ಸೇರಿಕೊಂಡು ಮರಿಯನ್ನು ತಂದು ಎಲ್ಲರೂ ಹಂಚಿಕೊಂಡು ಸಾಕಾಣಿಕೆ ಮಾಡುವುದು ಉತ್ತಮ.
ಯಾರಿಗೂ ಕೊಡುವಂತಹ ಲಾಭವನ್ನು ನೀವೇ 10 ಜನ ಪಡೆದುಕೊಳ್ಳಬಹುದು. ಆಗ ನಿಮ್ಮ ವಾತಾವರಣಕ್ಕೆ ಕೋಳಿ ಬೆಳೆದು ಮೊಟ್ಟೆ ಚೆನ್ನಾಗಿ ಇಡುತ್ತದೆ. ತಳಿಯ ಗುಣಮಟ್ಟ ನಿಮಗೆ ತಿಳಿದಿರುತ್ತದೆ. ಸಾವಿರಾರು ರೈತರು ಮಾರುಕಟ್ಟೆ ಸಮಸ್ಯೆ, ಮೊಟ್ಟೆ ಕೋಳಿಗಳಿಗೆ ಕೊಡುವಂತಹ ಆಹಾರದ ಪೂರೈಕೆ ಕೊರತೆಯಿಂದ ಬಿವಿ 380 ಕೋಳಿ ಸಾಕಾಣಿಕೆ ನಿಲ್ಲಿಸಿರುವುದನ್ನು ನಾವು ನೋಡಿದ್ದೇವೆ.
| ಸಂಜಯ್‌ಕುಮಾರ್ ಡಿ, ಶಿವಮೊಗ್ಗ, ಮೊ: 9743642246
WhatsApp - 1 | WhatsApp - 2 | WhatsApp - 3 | Join Telegram |