Cow Buffalo Best food - ಹಸು, ಎಮ್ಮೆಗಳ ಹಾಲಿನ ಇಳುವರಿಗೆ ಹೆಚ್ಚಿಸುವ ಆಹಾರ | ಇಲ್ಲಿದೆ ರೈತರಿಗೆ ಸಂಪೂರ್ಣ ಮಾಹಿತಿ....
ಹಾಲು ಕರೆಯುವ ಹಸು, ಎಮ್ಮೆಗಳ ದೇಹದ ತೂಕ ಮತ್ತು ಹಾಲಿನ ಇಳುವರಿಯ ಪ್ರಮಾಣಕ್ಕೆ ಅನುಸಾರವಾಗಿ ಆಹಾರ ನೀಡುವುದು ಹೇಗೆ? ಪಶು ಆಹಾರ, ಹಸಿರು ಮೇವು, ಒಣ ಮೇವಿನ ಸಮತೋಲನ ಮಿಶ್ರಣ ಹೇಗೆ? ಇಲ್ಲಿದೆ ರೈತರಿಗೆ ಸಂಪೂರ್ಣ ಮಾಹಿತಿ....
WhatsApp - 1 | WhatsApp - 2 | WhatsApp - 3 | Join Telegram |

Kannada Mitra - News Desk.
ಹಾಲು ಕರೆಯುವ ರಾಸುಗಳ ಆಹಾರದ ಅಗತ್ಯತೆಯನ್ನು ಹಾಲಿನ ಪ್ರಮಾಣ ಮತ್ತು ಕೊಬ್ಬಿನ ಅಂಶದ ಮೇಲೆ ನಿಗಧಿಗೊಳಿಸಲಾಗಿದೆ. ಹಾಲಿನ ಇಳುವರಿ ಕರು ಹಾಕಿದ ನಂತರ 6-8 ವಾರದ ತನಕ ಅಧಿಕವಾಗಿದ್ದು, ಈ ಅವಧಿಯಲ್ಲಿ ಉತ್ತಮ ಪೌಷ್ಟಿಕತೆಯ ಅಗತ್ಯವಿದೆ.
ಮೊದಲ ಮೂರು ತಿಂಗಳಲ್ಲಿ ಗುಣಮಟ್ಟದ ಆಹಾರ, ಹಸಿರು ಮೇವು ಮತ್ತು ಖನಿಜ ಮಿಶ್ರಣ ತಿನ್ನಿಸುವುದರಿಂದ ಹಸುವಿನ ಅನುವಂಶೀಯ ಶಕ್ತಿಗೆ ಅನುಸಾರವಾಗಿ ಹಾಲು ಪಡೆಯಬಹುದು. ಮೂರು ತಿಂಗಳ ನಂತರ ಪಶು ಆಹಾರದ ಪ್ರಮಾಣ ಕಡಿಮೆ ಮಾಡಿ ಹಸಿರು ಹುಲ್ಲು ಹಾಗೂ ಒಣ ಹುಲ್ಲನ್ನು ಹೆಚ್ಚಿಸಬಹುದು.
ರಾಸು ಗರ್ಭದಲ್ಲಿದ್ದಾಗ ಕೊನೆಯ ಎರಡು ತಿಂಗಳು ಹಾಲು ಕರೆಯುವುದನ್ನು ನಿಲ್ಲಿಸಿ 1-2 ಕೆ.ಜಿ ಸಮತೋಲನ ಆಹಾರವನ್ನು ಅಧಿಕವಾಗಿ ತಿನ್ನಿಸುವುದರಿಂದ ರಾಸು ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ. ಈ ಕ್ರಮದಿಂದ ಕರು ಹಾಕಿದ ನಂತರ ಬರುವ ಕೆಲವು ರೋಗಗಳನ್ನು ತಡೆಗಟ್ಟಬಹುದು.
ಸಾಮಾನ್ಯವಾಗಿ ಹಸುಗಳು ತಮ್ಮ 100 ಕೆ.ಜಿ ದೇಹದ ತೂಕಕ್ಕೆ 2 ರಿಂದ 2.5 ಕೆ.ಜಿ ಒಣ ಆಹಾರವನ್ನು ತಿಂದರೆ, ಎಮ್ಮೆಗಳು 2.5 ರಿಂದ 3 ಕೆ.ಜಿ ಆಹಾರ ತಿನ್ನುತ್ತವೆ. ಅಗತ್ಯವಿರುವ ಒಟ್ಟು ಒಣ ಆಹಾರದಲ್ಲಿ ಆಹಾರ ಮಿಶ್ರಣ ಹಾಗೂ ಹಸಿರು ಹುಲ್ಲುಗಳು ಇರುವುದು ಉತ್ತಮ. ಆಹಾರ ಮಿಶ್ರಣ ಮತ್ತು ಹುಲ್ಲಿನ ಪ್ರಮಾಣ ಹಾಲಿನ ಇಳುವರಿಗೆ ಅನುಸಾರವಾಗಿ ಬದಲಾಗುತ್ತದೆ.
ಆಹಾರ ನೀಡುವ ಕ್ರಮ
ರಾಸುಗಳ ದೇಹದ ತೂಕ, ಹಾಲಿನ ಇಳುವರಿಯ ಪ್ರಮಾಣಕ್ಕೆ ಅನುಸಾರವಾಗಿ ಆಹಾರ ನೀಡಬೇಕು. ಲಭ್ಯವಿರುವ ಪಶು ಆಹಾರ, ಹಸಿರು ಮೇವುಗಳಲ್ಲಿರುವ ಪೌಷ್ಟಿಕಾಂಶಗಳ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಒಟ್ಟು ಆಹಾರದ ಪ್ರಮಾಣವನ್ನು ನಿರ್ಧರಿಸಬೇಕು.
ಸ್ಥಳೀಯ ಹಸುಗಳಿಗೆ ಶರೀರ ನಿರ್ವಹಣೆಗೆ 4 ರಿಂದ 5 ಕೆ.ಜಿ ಒಣಹುಲ್ಲು ಮತ್ತು 1 ರಿಂದ 1.5 ಕೆ.ಜಿ ಸಮತೋಲನ ಆಹಾರ ಬೇಕಾದರೆ, ಮಿಶ್ರ ತಳಿ ಹಸುಗಳಿಗೆ 5 ರಿಂದ 6 ಕೆ.ಜಿ ಒಣ ಹುಲ್ಲಿನ ಜೊತೆಗೆ 2 ಕೆ.ಜಿ ಪಶು ಸಮತೋಲನ ಆಹಾರ ಬೇಕಾಗುತ್ತದೆ. ಅಧಿಕವಾಗಿ ಹಸಿರು ಮೇವು ಲಭ್ಯವಿದ್ದಾಗ ಸಮತೋಲನ ಆಹಾರದ ಪ್ರಮಾಣ ಕಡಿಮೆ ಮಾಡಬಹುದು.
ಉತ್ತಮ ಡೈರಿ ಸಮತೋಲನ ಆಹಾರ ಮಿಶ್ರಣದಲ್ಲಿ ಕನಿಷ್ಟ ಶೇ. 18 ರಿಂದ 20ರಷ್ಟು ಕಚ್ಚಾ ಸಸಾರಜನಕ ಮತ್ತು ಶೇ.68 ರಿಂದ 70ರಷ್ಟು ಶಕ್ತಿಯ ಅಂಶವಿರಬೇಕು. ಪಶು ಆಹಾರ ಪದಾರ್ಥಗಳ ಸ್ಥಳೀಯ ಲಭ್ಯತೆ, ದರಗಳಿಗೆ ಅನುಕೂಲವಾಗಿ ಆಯ್ಕೆ ಮಾಡಿ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಹಾರ ಮಿಶ್ರಣ ತಯಾರಿಸಬೇಕು.
ಹಾಲಿನ ಇಳುವರಿಗೆ ತಕ್ಕ ಆಹಾರ
ಹಸು/ಎಮ್ಮೆಗಳು ಹಾಲು ಕರೆಯುವಾಗ ಶರೀರದ ನಿರ್ವಹಣೆಯ ಜೊತೆಗೆ ಹಾಲು ಉತ್ಪಾದನೆಗೆ ಕೂಡ ಹೆಚ್ಚುವರಿ ಪೌಷ್ಟಿಕಾಂಶಗಳನ್ನು ನೀಡಬೇಕು. ಶರೀರ ನಿರ್ವಹಣೆಗೆ 1.5 ಕೆ.ಜಿ ಸಮತೋಲನ ಆಹಾರ ಬೇಕಾದರೆ, ಜೊತೆಗೆ ಪ್ರತೀ ಲೀಟರ್ ಹಾಲಿನ ಉತ್ಪಾದನೆಗೆ ಹಸುಗಳಿಗೆ 400 ಗ್ರಾಮ್‌ಗೂ ಹೆಚ್ಚು ಪಶು ಆಹಾರ ನೀಡಬೇಕು.
ಎಮ್ಮೆಗಳಿಗೆ ಪ್ರತೀ ಲೀಟರ್ ಹಾಲಿಗೆ 500 ಗ್ರಾಂ ಪಶು ಆಹಾರ ನೀಡಬೇಕು. ಜೊತೆಗೆ ಗುಣಮಟ್ಟದ ಹಸಿರು ಹುಲ್ಲುಗಳನ್ನು ತಿನ್ನಿಸುವುದರಿಂದ ಹಾಲಿನ ಇಳುವರಿ ಹೆಚ್ಚಿಸಬಹುದು. ಹಸಿರು ಹುಲ್ಲುಗಳು ಜೀರ್ಣ ಕ್ರಿಯೆಯನ್ನು ವೃದ್ಧಿಗೊಳಿಸಿ ಕಡಿಮೆ ವೆಚ್ಚದಲ್ಲಿ ಅಧಿಕ ಹಾಲು ಪಡೆಯಲು ಸಹಕಾರಿ.
ದ್ವಿದಳ ಸಸ್ಯಗಳಾದ ಬರ್ಸೀಮ್, ಕುದುರೆ ಮಸಾಲೆ, ಅಲಸಂದಿ ಸೊಪ್ಪುಗಳನ್ನು ಹಸಿರು ಹುಲ್ಲುಗಳಾದ ಗಿನಿ, ಜೋಳಗಳ ಜೊತೆಗೆ ಮಿಶ್ರ ಮಾಡಿ ತಿನ್ನಿಸುವುದು ಒಳ್ಳೆಯದು. ಹತ್ತು ಕೆ.ಜಿ ಹಸಿರು ಹುಲ್ಲು, ಒಂದು ಕೆ.ಜಿ ಸಮತೋಲನ ಆಹಾರ ಮಿಶ್ರಣಕ್ಕೆ ಸರಿಸಮ. 35 ರಿಂದ 40 ಕೆ.ಜಿಯಷ್ಟು ಗುಣಮಟ್ಟದ ಹಸಿರು ಹುಲ್ಲನ್ನು ಕೊಚ್ಚಿ ತಿನ್ನಿಸುವುದರಿಂದ 6 ರಿಂದ 7 ಲೀಟರ್ ಹಾಲಿನ ಇಳುವರಿಯನ್ನು ಸಮತೋಲನ ಆಹಾರದ ಬಳಕೆ ಇಲ್ಲದೇ ಪಡೆಯಬಹುದು.
ನಮ್ಮ ನಾಟಿ ರಾಸುಗಳು ದಿನಕ್ಕೆ 2-3 ಲೀಟರ್ ಹಾಲು ಹಿಂಡುವ ಸಾಮರ್ಥ್ಯ ಪಡೆದಿದ್ದು; ರೈತರು ವಿಶೇಷವಾಗಿ ಆಹಾರ ಕ್ರಮ ಪಾಲಿಸುವುದಿಲ್ಲ. ಆದರೆ ಒಣ ಹುಲ್ಲು ಹಾಗೂ ಬಯಲಲ್ಲಿ ಮೇಯಿಸುವುದರ ಜೊತೆಗೆ ಸ್ವಲ್ಪ ಪ್ರಮಾಣದ (3-4 ಕೆ.ಜಿ) ಹಸಿರು ಹುಲ್ಲು ಹಾಗೂ 1-1.5 ಕೆ.ಜಿ ಮನೆಯಲ್ಲೇ ತಯಾರಿಸಿದ ಪಶು ಆಹಾರ ತಿನ್ನಿಸುವುದರಿಂದ ಹಾಲಿನ ಪ್ರಮಾಣ ವೃದ್ಧಿಗೊಳಿಸಬಹುದು. ಜೊತೆಗೆ ಖನಿಜ ಮಿಶ್ರಣ ತಿನ್ನಿಸುವುದರಿಂದ ಗರ್ಭಧಾರಣೆಗೆ ಸಂಬAಧಿಸಿದ ಸಮಸ್ಯೆಗಳನ್ನು ತೆಡೆಯಬಹುದು.
ಅದೇ ರೀತಿ ಬೇಸಾಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೋರಿ/ಎತ್ತುಗಳನ್ನು ಬಳಸುವುದು ಸಾಮಾನ್ಯ. ಬಳಸುವ ಕೆಲಸ ಮತ್ತು ಕೆಲಸದ ಅವಧಿಗೆ ಅನುಸಾರವಾಗಿ ಒಣಹುಲ್ಲುಗಳ ಜೊತೆಗೆ ಹಸಿರು ಹುಲ್ಲು ಹಾಗೂ 2 ರಿಂದ 3 ಕೆ.ಜಿ ಸಮತೋಲನ ಆಹಾರ ತಿನ್ನಿಸುವುದು ಒಳ್ಳೆಯದು.
ಜೋಳ, ನೇಪಿಯರ್, ಪ್ಯಾರಾ, ಗಿನಿ, ರೋಡ್ಸ್'ನಂತಹ ಹಸಿರು ಹುಲ್ಲುಗಳು ಹಾಗೂ ಕುದುರೆ ಮಸಾಲೆ, ಬರ್ಸೀಮ್, ಅಲಸಂದಿ, ಸೋಯಾಬೀನ್ ಸೊಪ್ಪಿನಂತಹ ದ್ವಿದಳ ಹಸಿರು ಹುಲ್ಲುಗಳು ರಾಸುಗಳಿಗೆ ಉತ್ತಮ.
| ಎನ್. ಆನಂದನ್. ಡಿ. ರಾಜೇಂದ್ರನ್, ಜಿ. ಆನಂದ ಮಣೆಗಾರ್ ಮತ್ತು ಡಾ. ಒ ಆರ್ ನಟರಾಜು, ಜಿಕೆವಿಕೆ ಮಾಹಿತಿ ಕೇಂದ್ರ
WhatsApp - 1 | WhatsApp - 2 | WhatsApp - 3 | Join Telegram |