ಮಳೆಬೆಳೆ ಸಮೃದ್ಧಿ ಅನ್ನದಾತರು ಸತೃಪ್ತ | ರೈತರ ಬದುಕು ವಿಶ್ಲೇಷಿಸುವ ಮೈಲಾರ ಕಾರ್ಣಿಕಗಳು Mylara lingeshwara karnika 2025
ಮೈಲಾರ ಕಾರ್ಣಿಕಗಳು ಪ್ರತಿ ವರ್ಷ ರೈತರ ಬದುಕನ್ನು ವಿಶ್ಲೇಷಿಸುತ್ತ ಆ ವರ್ಷದ ಮಳೆಬೆಳೆ ಭವಿಷ್ಯ ನುಡಿಯುತ್ತವೆ. ಶತಮಾನದ ಇತಿಹಾಸವಿರುವ ಈ ಭವಿಷ್ಯವಾಣಿ ಹಿನ್ನಲೆ ಏನು? ಕಾರ್ಣಿಕ ಎಂದರೇನು? ಯಾರೀ ಮೈಲಾರಲಿಂಗ ಸ್ವಾಮಿ? ಸಂಪೂರ್ಣ ಮಾಹಿತಿ ಇಲ್ಲಿದೆ...
WhatsApp - 1 | WhatsApp - 2 | WhatsApp - 3 | Join Telegram |

Kannada Mitra - News Desk.
‘ತುಂಬಿದ ಕೊಡ ತುಳಿಕಿತಲೇ ಪರಾಕ್’ ಇದು ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕಿನ ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ 2025ನೇ ಸಾಲಿನ ವಾರ್ಷಿಕ ಕಾರ್ಣಿಕದ ಭವಿಷ್ಯವಾಣಿ. ಇಂದು ಫೆಬ್ರವರಿ 14, ಶುಕ್ರವಾರ ಸಂಜೆ 5 ಗಂಟೆಗೆ ಹನ್ನೊಂದು ದಿನಗಳ ಉಪವಾಸ ವ್ರತ ಆಚರಿಸಿದ್ದ ಗೊರವಪ್ಪ ರಾಮಪ್ಪಜ್ಜ ಧನಸ್ಸನ್ನು ಏರಿ ಈ ಭವಿಷ್ಯವಾಣಿ ನುಡಿದಿದ್ದಾರೆ.
ಸದರಿ ಕಾರ್ಣಿಕದ ನುಡಿಯು ರೈತರ ಬದುಕಿನ ವಿಶ್ಲೇಷಣೆಯಾಗಿದ್ದು; ಈ ವರ್ಷದ ಕಾರ್ಣಿಕವು ‘ಶುಭ ಸೂಚಕವಾಗಿದ್ದು; ಎಲ್ಲವೂ ಸೂಸುತ್ರವಾಗಲಿದೆ. ಮಳೆ ಬೆಳೆ ಎಲ್ಲವೂ ಸಂಪನ್ನವಾಗುತ್ತದೆ. ರೈತರಿಗೆ ಶುಭವಾಗಲಿದೆ’ ಎಂದು ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ತಿಳಿಸಿದ್ದಾರೆ. ಇನ್ನು ಕೆಲವರು ಕಾರ್ಣಿಕದ ನುಡಿಯನ್ನು ರಾಜಕೀಯಕ್ಕೆ ಅನ್ವಯಿಸುವಂತೆ ಅಂದಾಜಿಸಿದ್ದಾರೆ.
ಕಳೆದ ಬಾರಿ ಅಂದರೆ 2024ರಲ್ಲಿ ‘ಮಳೆ ಬೆಳೆ ಎಲ್ಲಾ ಸಂಪಾದಿತಲೇ ಪರಾಕ್’ ಎಂದು ಭವಿಷ್ಯವಾಣಿ ನುಡಿದಿದ್ದು, ಇದರಂತೆಯೇ ಉತ್ತಮ ಮಳೆಯಾಗಿದ್ದು, ಬೆಳೆಯು ಕೂಡ ಚೆನ್ನಾಗಿ ಬಂದಿವೆ. ಈ ಮೂಲಕ ಕಳೆದ ಬಾರಿಯ ಭವಿಷ್ಯ ನಿಜ ಆಗಿದೆ. 2023ರಲ್ಲಿ ಕಾರ್ಣಿಕ ‘ಅಂಬಲಿ ಹಳಿಸಿತು, ಕಂಬಳಿ ಬೀಸಿತಲೇ ಪರಾಕ್’ ಎಂಬ ಕಾರ್ಣಿಕ ಭವಿಷ್ಯವನ್ನು ನುಡಿದಿದ್ದರು.
ಶತಮಾನಗಳ ಇತಿಹಾಸ
ಹಾಗೇ ನೋಡಿದರೆ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಗೆ ಶತಮಾನಗಳ ಇತಿಹಾಸವಿದೆ. ಕಾರ್ಣಿಕೋತ್ಸವಕ್ಕೆ ರಾಜ್ಯ-ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಈ ಜಾತ್ರೆಯ ಮುಖ್ಯ ಆಕರ್ಷಣೆ ಕಾರ್ಣಿಕ ನುಡಿ. ಗೊರವಪ್ಪನಿಂದ ಹೊರಡುವ ಒಂದು ವಾಕ್ಯವನ್ನು ಆಲಿಸಲು ಲಕ್ಷಾಂತರ ಜನರು ಇಲ್ಲಿಗೆ ಬರುತ್ತಾರೆ. ಕಾರ್ಣಿಕದ ನುಡಿಯನ್ನು ಭಕ್ತರು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ. ಪ್ರಸ್ತುತ ರಾಜಕೀಯದ ಸ್ಥಿತಿಗತಿ, ಮಳೆ-ಬೆಳೆ ಕುರಿತಂತೆ ಕಾರ್ಣಿಕ ನುಡಿ ಇರುತ್ತದೆಂಬುದು ನಂಬಿಕೆ.
ಕಾರ್ಣಿಕವೆಂದರೆ ಭವಿಷ್ಯವಾಣಿ. ಭಾರತ ಹುಣ್ಣಿಮೆಯ ಮರುದಿನ ಮುಖ್ಯ ಗುಡಿಯಿಂದ ಪೂರ್ವ ದಿಕ್ಕಿಗಿರುವ ಡೆಂಕನಮರಡಿಗೆ ಮೈಲಾರಲಿಂಗನ ಮೌನ ಉತ್ಸವ ಹೊರಡುತ್ತದೆ. ಇದು ಶಿವನು ಅಸುರರನ್ನು ಸಂಹರಿಸಲು ಯುದ್ಧಭೂಮಿಗೆ ಸದ್ದುಗದ್ದಲವಿಲ್ಲದೆ ಹೋದುದರ ಸಂಕೇತ. ಈ ಮೌನ ಮೆರವಣಿಗೆಯಲ್ಲಿ ಹೋದ ಕಾರ್ಣಿಕದ ಗೊರವಪ್ಪ, ಮೈಲಾರಲಿಂಗಪ್ಪನ ಡೆಂಕನಮರಡಿಯಲ್ಲಿಯೇ ಉಳಿದುಕೊಳ್ಳುತ್ತಾರೆ.
ಕಾರ್ಣಿಕಕ್ಕೆ ಕಂಚಾವೀರರು, ಗೊರವ-ಗೊರವಿಯರು ಹಾಗೂ ಭಕ್ತರು ನೆರೆಯುತ್ತಾರೆ. ಆ ದಿನ ಸಂಜೆಯೇ ಕಾರ್ಣಿಕ ಮುಗಿದು ಹೋಗುತ್ತದೆ. ಇದು ಅಸುರರನ್ನು ಕೊಂದ ವಿಜಯ ದಿವಸ. ಸಂಪ್ರದಾಯದಂತೆ ಸ್ವಾಗತಿಸಲು ದೇವಸ್ಥಾನ ಧರ್ಮಕರ್ತ ಒಡೆಯರು ಕುದುರೆ ಏರಿ ಮುಖ್ಯ ಗುಡಿಯಿಂದ ಡೆಂಕನಮರಡಿಗೆ ಬರುತ್ತಾರೆ.
ಈ ಹೊತ್ತಿಗೆ ನಾಡಿನಿಂದ ಬಂದ ಲಕ್ಷೋಪಲಕ್ಷ ಜನರು `ಏಳು ಕೋಟಿ ಕೋಟಿಗೂ, ಚಾಂಗ ಮಲೋ’ ಘೋಷಣೆ ಕೂಗುತ್ತ ಹರ್ಷೊದ್ಗಾರ ಮಾಡುತ್ತಿರುತ್ತಾರೆ. ಕೂಡಲೇ ಸುಮಾರು 15 ಅಡಿ ಎತ್ತರದ ಬಿಲ್ಲನ್ನು ಕಾರ್ಣಿಕದ ಗೊರವಪ್ಪ ಸರಸರನೆ ಏರಿ `ಸದ್ದಲೇ...’ ಎಂದಾಗ ಎಲ್ಲರೂ ಮೌನವಾಗುತ್ತಾರೆ. ಕಾರ್ಣಿಕದ ಗೊರವಪ್ಪ ಅತ್ತಿತ್ತ ನೋಡಿ ಕಾರ್ಣಿಕದ ನುಡಿ ಹೇಳಿ ಕೆಳಗೆ ಬೀಳುತ್ತಾನೆ.
ಬಿಲ್ಲಿನ ಸುತ್ತಲೂ ನಿಂತ ಭಕ್ತರು ಆತನನ್ನು ಅನಾಮತ್ತಾಗಿ ಎತ್ತಿಕೊಳ್ಳುತ್ತಾರೆ. `ಏಳುಕೋಟಿ’ ಉದ್ವೋಷ ಮೊಳಗುತ್ತದೆ. ಕಾರಣಿಕ ವಾಣಿ ಆದ ಕೂಡಲೇ ಅದನ್ನು ಕುರಿತು ಜನ ಅದರ ಅರ್ಥ ವಿವರಣೆಯಲ್ಲಿ ತೊಡಗುತ್ತಾರೆ. ತಮಗೆ ತಿಳಿದ ರೀತಿಯಲ್ಲಿ ಆ ವರ್ಷದ ಭವಿಷ್ಯದ ಸೂಚನೆ ಅದರಲ್ಲಿ ಅಡಗಿದೆಯೆಂದು ಭಾವಿಸುತ್ತಾರೆ.
ಆಕಾಶಕ್ಕೆ ಸಿಡ್ಲ ಬಡೀತಲೇ ಪರಾಕ್, ಮರ್ತ್ಯಕ್ಕ ಮಬ್ಬಗವೀತಲೇ ಪರಾಕ್, ಸಣ್ಣದೊಂದದಿನಾ ಬಂತಲೇ ಪರಾಕ್, ಅಂಬ್ಲಿ ಹಳಿಸ್ತಲೇ ಪರಾಕ್, ಕಲಕಮಲಕ್ ಆದೀತಲೇ ಪರಾಕ್, ಸಮನಿಧಿಯಲೇ ಪರಾಕ್, ಹುಟ್ಟಿದ ಕೂಸು ಕಷ್ಟಪಟ್ಟು ಸುಖಾ ಪಡೀತಲೇ ಪರಾಕ್, ಮುತ್ತಿನ ಮಾಲಿ ಹರದು ಚೂರಾದೀತಲೇ ಪರಾಕ್...
ಹೀಗೆ ಒಗಟಿನ ರೂಪದಲ್ಲಿ ಕಾರ್ಣಿಕದ ಗೊರವಪ್ಪನಿಂದ ಹೊರ ಬೀಳುವ ಒಂದೇ ಸಾಲಿನ ನುಡಿಯು ಆ ವರ್ಷದ ಭವಿಷ್ಯವನ್ನು ಸಂಕೇತಿಸುತ್ತದೆ ಎನ್ನಲಾಗುತ್ತದೆ. ಕೆಲವೊಮ್ಮೆ ಕಾರ್ಣಿಕದ ನುಡಿಯು ಪುನರಾವರ್ತನೆಯಾಗುವುದೂ ಉಂಟು.
ಜನಪದರ ದೈವ
ಮೈಲಾರಲಿಂಗ ಜನಪದರ ದೈವ. ಜನಪದರು ಅಂದರೆ ಸಾಮಾನ್ಯವಾಗಿ ಗ್ರಾಮೀಣರು. ಪಶುಪಾಲಕರು, ರೈತಾಪಿ ಹಿನ್ನಲೆಯ ದೈವ ಈತ. ಗಡಿ-ಭಾಷೆ, ಜಾತಿ-ಧರ್ಮಗಳನ್ನು ಮೀರಿದ ಪ್ರಭಾವ ಈತನದು. ಒಂದು ಅಂದಾಜಿನ ಪ್ರಕಾರ ಪ್ರಮುಖ, ಅಪ್ರಮುಖ ಸೇರಿ ಈತನ ಐದುನೂರು ದೇವಾಲಯಗಳು ವಿವಿಧ ಪ್ರದೇಶಗಳಲ್ಲಿ ಕಂಡು ಬರುತ್ತವೆ.
ಉತ್ತರ ಕರ್ನಾಟಕ ಭಾಗದಲ್ಲಿ ಊರೂರು, ಕೇರಿ ಕೇರಿಗಳಲ್ಲೂ ಈತನ ಸಿಬಾರಕಟ್ಟೆ(ಗುಡಿ)ಗಳಿವೆ. ಶೈವ, ವೈಷ್ಣವ ಸಂಪ್ರದಾಯಗಳನ್ನು ತನ್ನಲ್ಲಿ ಸಂಗಮಿಸಿಕೊಂಡು, ಜೈನ ಕಾವ್ಯಗಳಲ್ಲಿಯೂ ಉಲ್ಲೇಖಿತನಾದ ಮೈಲಾರಲಿಂಗ ವಿವಿಧ ಬುಡಕಟ್ಟು, ಜಾತಿ-ಮತಗಳಿಗೆ ಸೇರಿದ ಜನರಿಂದ ಪೂಜಿಸಲ್ಪಡುತ್ತಾನೆ.
ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರ, ಗೋವಾ, ಮಧ್ಯಪ್ರದೇಶಗಳವರೆಗೆ ಈತನ ಸಂಪ್ರದಾಯಗಳು ಹರಡಿಕೊಂಡಿವೆ. ವಿಶೇಷವಾಗಿ ಕರ್ನಾಟಕದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಹಿರೇ ಮೈಲಾರ, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ, ಬೆಳಗಾವಿ ಜಿಲ್ಲೆಯ ಮಂಗಸೂಳಿ, ಯಾದಗಿರಿ ಜಿಲ್ಲೆಯ ಮೈಲಾಪುರ, ಚಿತ್ರದುರ್ಗ ಜಿಲ್ಲೆಯ ಮೈಲಾರಪುರ, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಮುಂತಾದ ಮೈಲಾರನ ಕ್ಷೇತ್ರಗಳು ಸಾಕಷ್ಟು ಸುಪ್ರಸಿದ್ಧವಾಗಿವೆ.
ಈ ಪೈಕಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಶ್ರೀಕ್ಷೇತ್ರ ಮೈಲಾರದ ಜಾತ್ರೆ ಹೆಚ್ಚು ಸುಪ್ರಸಿದ್ಧವಾಗಿದೆ. ಇದನ್ನು ಹಿರೇ ಮೈಲಾರ ಎಂದೇ ಕರೆಯುತ್ತಾರೆ. ತುಂಗಭದ್ರಾ ನದಿ ತೀರದಲ್ಲಿರುವ ಮೈಲಾರ ಕ್ಷೇತ್ರದಲ್ಲಿ ರಥಸಪ್ತಮಿಯ ದಿನದಿಂದ ಭಾರತ ಹುಣ್ಣಿಮೆಯ ತನಕ ಏಳುಕೋಟಿ ಮೈಲಾರಲಿಂಗನ ಜಾತ್ರೆಯು ಅತ್ಯಂತ ಭಕ್ತಿಭಾವ, ಸಡಗರ, ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಲಕ್ಷಾಂತರ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ.
ನಾನಾ ಬಗೆಯ ವಾಹನಗಳಲ್ಲಷ್ಟೇ ಅಲ್ಲದೆ ದೇವರಿಗೆ ಹರಕೆ ಹೊತ್ತು ಬರಿಗಾಲಲ್ಲೂ ಬರುವ ಭಕ್ತರಿದ್ದಾರೆ. ಈ ಜಾತ್ರೆಗೆ ಕರ್ನಾಟಕವಲ್ಲದೆ ಆಂಧ್ರ, ಮಹಾರಾಷ್ಟ್ರ, ಗೋವಾ ಮೊದಲಾದ ಕಡೆಗಳಿಂದ ಮೈಲಾರಲಿಂಗೇಶ್ವರ ಭಕ್ತರು ಆಗಮಿಸುತ್ತಾರೆ. ಸದರಿ ಮೈಲಾರ ಕ್ಷೇತ್ರ ಭಕ್ತರಿಗೆ ಭಕ್ತಿ-ಶ್ರದ್ಧೆಯ ಕೇಂದ್ರವಾದರೆ, ಅಧ್ಯಯನಾಸಕ್ತರಿಗೆ ಜನಪದ ಮೂಲವನ್ನು ಅರಿಯುವ ಕೇಂದ್ರವೂ ಹೌದಾಗಿದೆ.
| ಮಾಲತೇಶ್ ಮಾಳಮ್ಮನವರ್
WhatsApp - 1 | WhatsApp - 2 | WhatsApp - 3 | Join Telegram |