ರೈತರಿಗೆ ಕೋಟಿ ಕೋಟಿ ಆದಾಯದ ಡಾರ್ಪರ್ ಕುರಿ ಸಾಕಣೆ | ವಿದೇಶಿ ತಳಿಯ ಸಂಪೂರ್ಣ ಮಾಹಿತಿ ಇಲ್ಲಿದೆ... Dorper Sheep farming
ಡಾರ್ಪರ್ ಕುರಿ ವಿಶೇಷತೆ ಏನು? ನಮ್ಮ ಸಾಮಾನ್ಯ ರೈತರು ಇದನ್ನು ಸಾಕಣೆ ಮಾಡಬಹುದೇ? ಲೋಕಲ್ ಕುರಿಯೊಂದಿಗೆ ಡಾರ್ಪರ್ ಕ್ರಾಸ್ ಮಾಡುವ ವಿಧಾನ ಹೇಗೆ? ಎಂಬ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ...
WhatsApp - 1 | WhatsApp - 2 | WhatsApp - 3 | Join Telegram |

Kannada Mitra - News Desk.
ಈಚೆಗೆ ಡಾರ್ಪರ್ ಕುರಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಏಕೆಂದರೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಕುರಿಯನ್ನು ಸಾಮಾನ್ಯ ರೈತ ಕೂಡ ಶೆಡ್‌ಗಳಲ್ಲಿ ಸಾಕಣೆ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು. ಆದರೆ ಅಷ್ಟೊಂದು ಹಣ ಕೊಟ್ಟು ತಂದು ಸಾಕುವುದು ಕಷ್ಟ ಎಂದು ಜರಿಯುವವರೇ ಹೆಚ್ಚು.
ಬೆಂಗಳೂರಿನ ಹೊರವಲಯ ಬಾಗಲೂರಿನ ಮಾರನೇಹಳ್ಳಿಯಲ್ಲಿ ಸ್ವಂತ ತೋಟದಲ್ಲಿ ನೂರಾರು ಡಾರ್ಪರ್ ಕುರಿಗಳನ್ನು ಸಾಕಣೆ ಮಾಡುತ್ತಿರುವ ಪುಟ್ಟು ಅಂಜಿನಪ್ಪ ಎಂಬುವವರು ವರ್ಷವೊಂದರಲ್ಲಿ ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾರೆ. ಖರ್ಚು ಕಳೆದು 50-70 ಲಕ್ಷ ರೂಪಾಯಿ ಆದಾಯ ಸಿಗುತ್ತಿದೆ.
ಏನಿದು ಡಾರ್ಪರ್ ಕುರಿ?
ಇದೊಂದು ವಿದೇಶಿ ಕುರಿ. ಭಾರತದಲ್ಲಿ, ಬಹುಮುಖ್ಯವಾಗಿ ಕರ್ನಾಟಕದಲ್ಲಿ ಈಗೀಗ ಬಹಳಷ್ಟು ಜನಪ್ರಿಯವಾಗುತ್ತಿದ್ದು; ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಡಾರ್ಪರ್ ಕುರಿ ಸಾಕಾಣಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಹಲವು ಕಡೆಗೆ ಈ ಕುರಿ ಸಾಕಾಣಿಕೆ ಮಾಡಲಾಗುತ್ತಿದ್ದು; ಅನೇಕರಿಗೆ ಸಾಕಾಣಿಕೆ ಮಾಡುವ ಆಸಕ್ತಿಯೂ ತೀವ್ರವಾಗುತ್ತಿದೆ.
ನಮ್ಮ ಹಳೇ ಮೈಸೂರು ಪ್ರಾಂತ್ಯದ ಬಂಡೂರಿ ಕುರಿಯನ್ನು ಹೋಲುವ ಅಪರೂಪದ ಕುರಿತಳಿ ಇದು. 1930ರ ದಶಕದಲ್ಲಿ ದಕ್ಷಿಣ ಆಫ್ರಿಕಾದ ಕೃಷಿ ಇಲಾಖೆಯು ಡಾರ್ಪರ್ ಡಾರ್ಸೆಟ್ ಹಾರ್ನ್ ಮತ್ತು ಬ್ಲ್ಯಾಕ್ ಹೆಡ್ ಪರ್ಷಿಯನ್ ಎಂಬೆರಡು ಕುರಿ ತಳಿಯ ವಂಶವಾಹಿಯನ್ನು ಬಳಸಿಕೊಂಡು ಮಾಂಸಕ್ಕಾಗಿಯೇ ಶುದ್ಧ ಡಾರ್ಪರ್ ಕುರಿಯನ್ನು ಅಭಿವೃದ್ಧಿಪಡಿಸಿದೆ.
ಸಂಕರಣಗೊಂಡ ಕುರಿ...
ಬ್ಲ್ಯಾಕ್ ಹೆಡ್ ಹೆಡ್ ಪರ್ಷಿಯನ್ ಕುರಿಯು ಸೊಮಾಲಿಯಾ ಮತ್ತು ದಕ್ಷಿಣ ಅರೇಬಿಯನ್ ದೇಶದ ಮೂಲದ್ದಾಗಿದ್ದು, ಈ ತಳಿಯ ಗಂಡು ಮತ್ತು ಹೆಣ್ಣು ಕುರಿಗಳಿಗೆ ಸಾಮಾನ್ಯವಾಗಿ ಕೊಂಬುಗಳು ಇರುವುದಿಲ್ಲ. ಈ ಕುರಿಯ ತಲೆಯು ಕಪ್ಪು ಬಣ್ಣದಿಂದ ಕುಡಿದ್ದು ದೇಹವು ಬಿಳಿ ಬಣದಲ್ಲಿರುತ್ತದೆ.
ಇವುಗಳ ಬೆನ್ನು ಕೊಬ್ಬಿನಂಶದಿಂದ ಕೂಡಿರುತ್ತದೆ ಮತ್ತು ಎಲ್ಲ ರೀತಿಯ ಹವಾಗುಣಗಳಲ್ಲಿ ಹೊಂದಿಕೊಂಡು ಜೀವಿಸುತ್ತವೆ. ವಯಸ್ಸಿಗೆ ಬಂದ ಗಂಡು ಕುರಿ ಸುಮಾರು 50 ಕೆ.ಜಿ ತೂಕ ಹೊಂದಿದ್ದರೆ, ವಯಸ್ಕ ಹೆಣ್ಣು ಕುರಿಗಳ ದೇಹ ತೂಕವು ಸುಮಾರು 30 ಕೆ.ಜಿ.
ಇನ್ನು ಡಾರ್ಸೆಟ್ ಹಾರ್ನ್ ಕುರಿ ತಳಿಯು ಯುನೈಟೆಡ್ ಕಿಂಗಡಮ್ ದೇಶದ ಬಹಳ ಪುರಾತನ ತಳಿಯಾಗಿದ್ದು, ಈ ತಳಿಯಲ್ಲಿ ಎರಡು ರೀತಿಯ ಕುರಿಗಳಿರುತ್ತವೆ. ಒಂದು ಕೊಂಬು ಬೆಳೆಯದ ಕುರಿಗಳು (Dorset Polled sheep), ಮತ್ತೊಂದು ಕೊಂಬುಳ್ಳ ಕುರಿಗಳು (Dorset Horned sheep). ಈ ಕುರಿಗಳು ಶುದ್ಧ ಬಿಳಿ ಬಣ್ಣ ಹೊಂದಿದ್ದು, ವಯಸ್ಸಿಗೆ ಬಂದ ಗಂಡು ಕುರಿಗಳು ಸುಮಾರು 50ರಿಂದ 70 ಕೆ.ಜಿ ತೂಕ ಹೊಂದಿದ್ದರೆ, ವಯಸ್ಕ ಹೆಣ್ಣು ಕುರಿಗಳು ಸುಮಾರು 70 ರಿಂದ 90 ಕೆ.ಜಿ ತೂಗುತ್ತವೆ.
ಒಟ್ಟಾರೆ ಡಾರ್ಪರ್ ಡಾರ್ಸೆಟ್ ಹಾರ್ನ್ ಮತ್ತು ಬ್ಲ್ಯಾಕ್ ಹೆಡ್ ಪರ್ಷಿಯನ್ ಕುರಿಗಳು ಎಲ್ಲ ರೀತಿಯ ವಾತಾವರಣದಲ್ಲಿ ಹೊಂದಿಕೊಂಡು ಜೀವಿಸುವ ಶುದ್ಧ ಮಾಂಸದ ತಳಿಯ ಕುರಿಗಳಾಗಿವೆ. ಹೀಗಾಗಿ ಈ ಎರಡು ಜಾತಿಯ ಕುರಿಗಳನ್ನು ಸಮ್ಮಿಲನಗೊಳಿಸಿ ಸೌತ್ ಆಫ್ರಿಕಾದಲ್ಲಿ ಸೃಷ್ಟಿಸಲಾದ ತಳಿಯೇ ಡಾರ್ಪರ್ ಕುರಿ.
ಇಂಗ್ಲೀಷಿನ ‘ಡಾರ್ಸೆಟ್’ (Dor’set) ಮತ್ತು ‘ಪರ್ಸಿಯನ್’ (Per’sian) ಶಬ್ಧಗಳ ಮೊದಲ ತಲಾ ಮೂರು ಮೂರು ಅಕ್ಷರಗಳಿಂದ ‘ಡಾರ್ಪರ್’ (Dorper)' ಎಂದು ಹೆಸರಿಸಲಾಗಿದೆ. ದಕ್ಷಿಣ ಆಫ್ರಿಕಾದ ಎರಡನೇ ಅತಿ ದೊಡ್ಡ ಕುರಿ ತಳಿಯಾಗಿರುವ ಡಾರ್ಪರ್ ಈಗ ಪ್ರಪಂಚದಾದ್ಯಂತ ಹರಡಿದೆ. ಕರ್ನಾಟಕದ ಮಟ್ಟಿಗೆ ಈ ಕುರಿ ಹುಟ್ಟು ಹಾಕಿದ ಕೌತುಕ ಸಣ್ಣದೇನಲ್ಲ.
ಡಾರ್ಪರ್ ವಿಶೇಷತೆ
ರುಚಿಕರವಾದ ಹೇರಳ ಮಾಂಸ, ವಿರಳ ಉಣ್ಣೆ ಮತ್ತು ಶುಷ್ಕ ಪ್ರದೇಶಕ್ಕೆ ಹೊಂದಿಕೊಂಡು ಶೀಘ್ರವಾಗಿ ಬೆಳೆಯವ ಗುಣ ಡಾರ್ಪರ್ ತಳಿಯ ವಿಶೇಷತೆ. ಈ ತಳಿಗೆ ಕಾಯಿಲೆಗಳು ಕಡಿಮೆ, ಖರ್ಚು ಕಡಿಮೆ. ಕೊಬ್ಬಿನಾಂಶ ಕಡಿಮೆಯಿರುವ ಇದರ ಮಾಂಸಕ್ಕೆ ಬೇಡಿಕೆ ಹೆಚ್ಚು. ಡಾರ್ಪರ್ ಕುರಿಗಳಲ್ಲಿ ಎರಡು ವಿಧ:
- ಬ್ಲ್ಯಾಕ್ ಹೆಡ್ ಡಾರ್ಪರ್: ಇವುಗಳ ತಲೆ ಮತ್ತು ಕತ್ತು ಕಪ್ಪು ಬಣ್ಣದಲ್ಲಿರುತ್ತದೆ. ದೇಹವು ಶುದ್ಧ ಬಿಳಿ ಬಣದಲ್ಲಿರುತ್ತದೆ.
- ವೈಟ್ ಡಾರ್ಪರ್: ಇವು ಪೂರ್ತಿ ಬಿಳಿ ಬಣದಲ್ಲಿರುತ್ತವೆ. ದಷ್ಟಪುಷ್ಟ ಮೈಕಟ್ಟು ಹೊಂದಿರುತ್ತವೆ.
ಮಾಂಸ ಉತ್ಪಾದನೆಯ ಉದ್ದೇಶದಿಂದಲೇ ಅಭಿವೃದ್ಧಿಪಡಿಸಿರುವ ತಳಿಯಾದ್ದರಿಂದ ಮಾಂಸ ಇಳುವರಿ ಹೆಚ್ಚು. ಡಾರ್ಪರ್ ಕುರಿಗಳು ಬೇಸಿಗೆ ಕಾಲದಲ್ಲಿ ಉಣ್ಣೆಯನ್ನು ಉದುರಿಸುತ್ತವೆ. ಹೀಗಾಗಿ ಇವುಗಳ ಉಣ್ಣೆ ಕತ್ತರಿಸುವ ಕೆಲಸವಿರುವುದಿಲ್ಲ. ಗಿಡ್ಡ ಕಾಲು, ಉದ್ದನೆಯ ಶರೀರ, ಬಿಳಿಯ ಬಣ್ಣದ ಮುಂಡ ಮತ್ತು ಕೊಂಬಿಲ್ಲದ ಕಪ್ಪು ಬಣ್ಣದ ರುಂಡದ ಈ ಕುರಿಗಳು ಎಂತಹ ಶುಷ್ಕ ವಾತಾವರಣಕ್ಕೂ ಹೊಂದಿಕೊಳ್ಳುವ ಗುಣ ಹೊಂದಿವೆ.
ಅತ್ಯಂತ ಕಡಿಮೆ ಉಣ್ಣೆ, ಅತಿ ಹೆಚ್ಚು ಮಾಂಸ ಹೊಂದಿರುವ ಡಾರ್ಪರ್ ಪ್ರಪಂಚದ ಯಾವುದೇ ಭಾಗದಲ್ಲಾದರೂ ಬದುಕಿ ಬಾಳುವ ಸಾಮರ್ಥ್ಯ ಹೊಂದಿದೆ. ಕಾಳಜಿಯಿಂದ ಸಾಕಿದರೆ ಭಾರಿ ಲಾಭದಾಯಕ.
ಇವು ದಪ್ಪ ಚರ್ಮದ ಕುರಿಗಳಾದ್ದರಿಂದ ಎಂತಹ ಕಠಿಣ ಹವಾಮಾನ ಪರಿಸ್ಥಿತಿನ್ನೂ ಎದುರಿಸುತ್ತವೆ. ಈ ತಳಿಯ ಕುರಿಗಳು ಮರಿಯನ್ನು ಸಾಕುವುದರಲ್ಲಿ ಉತ್ತಮ ಗುಣಗಳನ್ನು ಹೊಂದಿರುತ್ತವೆ. ಮಾತ್ರವಲ್ಲ ಡಾರ್ಪರ್ ಕುರಿಗಳು ದೀರ್ಘ ಸಂತಾನೋತ್ಪತ್ತಿ ಕಾಲವನ್ನು ಹೊಂದಿವೆ. ಹೆಣ್ಣು ಕುರಿಗಳು ಒಂದೇ ಸಮ್ಮಿಲನಕ್ಕೆ ಗರ್ಭ ಧರಿಸುತ್ತವೆ.
ಎಂಟು ತಿಂಗಳ ಅಂತರದಲ್ಲಿ ಮತ್ತೆ ಬೆದೆಗೆ ಬರುತ್ತವೆ. ಉತ್ತಮ ಪೌಷ್ಠಿಕ ಆಹಾರದೊಂದಿಗೆ ಜೋಪಾನ ಮಾಡಿದರೆ ಎರಡು ವರ್ಪದಲ್ಲಿ ಮೂರು ಬಾರಿ ಮರಿಗಳನ್ನು ಪಡೆಯಬಹುದು.
ತಾಯಿಯ ಹಾಲು ಕುಡಿಯುವ ಮರಿಗಳು ವೇಗವಾಗಿ ಬೆಳೆಯುತ್ತವೆ ಮತ್ತು ಹೆಚ್ಚಿನ ತೂಕವನ್ನು ಹೊಂದುತ್ತವೆ. ಇವು ವೇಗವಾಗಿ ಬೆಳೆಯುವ ಕುರಿ ತಳಿಯಾದ್ದರಿಂದ ಪ್ರತಿದಿನ ಸುಮಾರು 230 ರಿಂದ 250 ಗ್ರಾಂನಷ್ಟು ದೇಹದ ತೂಕವನ್ನು ಗಳಿಸುತ್ತವೆ. ಅಂದರೆ ಪ್ರತಿದಿನವೂ ಅಂದಾಜು ಕಾಲು ಕೆ.ಜಿಯಷ್ಟು ಮಾಂಸ ಬೆಳವಣಿಗೆಯಾಗುತ್ತದೆ.
ಹೀಗಾಗಿ ಕೇವಲ 3 ರಿಂದ 4 ತಿಂಗಳ ಪ್ರಾಯದ ಸಣ್ಣ ಮರಿಗಳು ಕೂಡ ಸುಮಾರು 36 ಕೆ.ಜಿ ತೂಗುತ್ತವೆ. ವಯಸ್ಸಿಗೆ ಬಂದ ಡಾರ್ಪರ್ ಹೆಣ್ಣು ಕುರಿಯ ದೇಹದ ತೂಕವು ಸುಮಾರು 70 ರಿಂದ 90 ಕೆ.ಜಿ ಇರುತ್ತದೆ. ಅದೇ ರೀತಿ ವಯಸ್ಕ ಡಾರ್ಪರ್ ಗಂಡು ಕುರಿಯ ದೇಹದ ತೂಕವು ಸುಮಾರು 100 ರಿಂದ 120 ಕೆ.ಜಿ! ಈಪಾಟಿ ಮಾಂಸ ಇಳುವರಿ ನೀಡುವ ಕುರಿ ಮತ್ತೊಂದಿಲ್ಲ.
| ಮಾಲತೇಶ್ ಎಂ.,
WhatsApp - 1 | WhatsApp - 2 | WhatsApp - 3 | Join Telegram |