Universal Pension Scheme-ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿ | ಯಾರಿಗೆಲ್ಲ ಸಿಗಲಿದೆ ಇದರ ಪ್ರಯೋಜನ?

ಕೇಂದ್ರ ಸರ್ಕಾರ ಸಾಮಾಜಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ‘ಸಾರ್ವತ್ರಿಕ ಪಿಂಚಣಿ ಯೋಜನೆ’ ಜಾರಿಗೊಳಿಸಲು ನಿರ್ಧರಿಸಿದೆ. ಏನಿದು ಹೊಸ ಪಿಂಚಣಿ ಯೋಜನೆ? ಇದರಿಂದ ಯಾರಿಗೆಲ್ಲ ಪ್ರಯೋಜನವಾಗಲಿದೆ? ಈಗಿರುವ ಪಿಂಚಣಿ ಯೋಜನೆಗಳು ಯಾವುವು? ಎಂಬಿತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ...

Feb 28, 2025 - 13:54
WhatsApp - 1 WhatsApp - 2 WhatsApp - 3 Join Telegram

Universal Pension Scheme-ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿ | ಯಾರಿಗೆಲ್ಲ ಸಿಗಲಿದೆ ಇದರ ಪ್ರಯೋಜನ?

Kannada Mitra - News Desk.

ಕೇಂದ್ರ ಸರ್ಕಾರವು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಾಮಾಜಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ‘ಸಾರ್ವತ್ರಿಕ ಪಿಂಚಣಿ ಯೋಜನೆ’ (Universal Pension Scheme) ಜಾರಿಗೊಳಿಸಲು ನಿರ್ಧರಿಸಿದೆ. ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ಸಮಗ್ರ ಸಾಮಾಜಿಕ ಭದ್ರತೆ ಅಥವಾ ಪಿಂಚಣಿ ಯೋಜನೆ

ಪಿಂಚಣಿ, ಆರೋಗ್ಯ ವಿಮೆ ಹಾಗೂ ನಿರುದ್ಯೋಗ ಭತ್ಯೆಯನ್ನು ಒಳಗೊಂಡಿರುವ ಸಾಮಾಜಿಕ ವಿಮಾ ವ್ಯವಸ್ಥೆಯು ಈಗಾಗಲೇ ಅಮೆರಿಕ, ಯೂರೋಪ್, ರಷ್ಯಾ, ಕೆನಡಾ ಹಾಗೂ ಚೀನಾದಲ್ಲಿ ಜಾರಿಯಲ್ಲಿವೆ. ಆದರೆ, ಭಾರತದಲ್ಲಿ ಮಾತ್ರ ಪ್ರಾವಿಡೆಂಟ್ ಫಂಡ್ ವ್ಯವಸ್ಥೆಯು ನಿವೃತ್ತಿ ಜೀವನದ ಪಿಂಚಣಿ ಹಾಗೂ ಆರೋಗ್ಯ ವಿಮೆಯ ಜತೆಗೆ ಬೆಸೆದುಕೊಂಡಿದೆ.

2036ರ ವೇಳೆಗೆ ದೇಶದಲ್ಲಿ 60 ವರ್ಷ ಮೀರಿದವರ ಸಂಖ್ಯೆಯು 22.7 ಕೋಟಿ ದಾಟಲಿದೆ ಎಂದು ಸರಕಾರದ ಸಂಶೋಧನೆಯಲ್ಲಿ ಬಹಿರಂಗಗೊಂಡಿದೆ. ಹಾಗಾಗಿ, ನಿವೃತ್ತರಿಗೆ ಹಾಗೂ ವೃದ್ಧರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಸರಕಾರವು ಸಮಗ್ರ ಸಾಮಾಜಿಕ ಭದ್ರತೆ ಅಥವಾ ಪಿಂಚಣಿ ಯೋಜನೆಯ ಜಾರಿಗೆ ಸಿದ್ಧತೆ ನಡೆಸುತ್ತಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ.

 ಹೊಸ ಪಿಂಚಣಿ ಯೋಜನೆಯಿಂದ ಯಾರಿಗೆಲ್ಲ ಪ್ರಯೋಜನ?

ಸಂಘಟಿತ ವಲಯದ ನೌಕರರು ಮತ್ತು ಸ್ವಯಂ ಉದ್ಯೋಗಿಗಳು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರಿಕರೂ ಈ ಯೋಜನೆಯ ಲಾಭ ಪಡೆಯಬಹುದು. ಈ ಹೊಸ ಯೋಜನೆಯು ಪ್ರಸ್ತುತ ಇರುವ ಭವಿಷ್ಯನಿಧಿ ಸಂಘಟನೆಯ ಪಿಂಚಣಿ ಯೋಜನೆಗಿಂತ ಭಿನ್ನವಾಗಿರಲಿದೆ. ದೇಶದಲ್ಲಿ ಪಿಂಚಣಿ/ಉಳಿತಾಯ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವ ಆಶಯವೂ ಹೊಸ ಯೋಜನೆಯ ಹಿಂದಿದೆ.

ಈಗ ಅಸ್ತಿತ್ವದಲ್ಲಿರುವ ‘ರಾಷ್ಟ್ರೀಯ ಪಿಂಚಣಿ ಯೋಜನೆ’ಯನ್ನು (National Pension Scheme - NPS) ಬದಲಾಯಿಸುವುದಿಲ್ಲ ಅಥವಾ ವಿಲೀನಗೊಳಿಸುವುದಿಲ್ಲ ಎಂದೂ ಸರ್ಕಾರ ಸ್ಪಷ್ಟಪಡಿಸಿದೆ. ಯೋಜನಾ ಪ್ರಸ್ತಾವನೆ ಪೂರ್ಣಗೊಂಡ ನಂತರ ಸಂಬಂಧಪಟ್ಟವರ ಜತೆ ಸಮಾಲೋಚನೆ ನಡೆಸಿ ಅಂತಿಮವಾಗಿ ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಲಾಗುತ್ತಿದೆ.

ಈಗಿರುವ ಪಿಂಚಣಿ ಯೋಜನೆಗಳು

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಸರಕಾರ ಈಗಾಗಲೇ ಹಲವಾರು ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದೆ. ಅಟಲ್ ಪಿಂಚಣಿ ಯೋಜನೆ’ ಇದಕ್ಕೊಂದು ಉದಾಹರಣೆಯಾಗಿದ್ದು, ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ಪೂರೈಸಿದ ನಂತರ ತಿಂಗಳಿಗೆ ಕನಿಷ್ಠ 1,000 ರೂ.ಗಳಿಂದ ಗರಿಷ್ಠ 5,000 ರೂ. ವರೆಗೆ ಪಿಂಚಣಿ ಪಡೆಯುತ್ತಾರೆ.

ಇದೇ ರೀತಿ ‘ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ್ ಯೋಜನೆ’ (PM-SYM) ಅನ್ನು ಬೀದಿಬದಿ ವ್ಯಾಪಾರಿಗಳು, ಮನೆಗೆಲಸದವರು ಮತ್ತು ಕಾರ್ಮಿಕರಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.

ಹಾಗೇನೇ ರೈತರಿಗಾಗಿ ‘ಪ್ರಧಾನ ಮಂತ್ರಿ ಕಿಸಾನ್ ಮಾನಧನ್’ ಯೋಜನೆಯನ್ನು ಕೂಡ ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ 60 ವರ್ಷ ಪೂರೈಸಿದ ನಂತರ, ತಿಂಗಳಿಗೆ 3,000 ರೂ. ಪಿಂಚಣಿ ಪಡೆಯುತ್ತಾರೆ. ಇದೆಲ್ಲದರ ನಡುವೆ ಇದೀಗ ಸರ್ಕಾರ ‘ಸಾರ್ವತ್ರಿಕ ಪಿಂಚಣಿ ಯೋಜನೆ’ ಜಾರಿಗೊಳಿಸಲು ನಿರ್ಧರಿಸಿದೆ. 

WhatsApp - 1 WhatsApp - 2 WhatsApp - 3 Join Telegram