Mahashivratri Special-ಶಿವರಾತ್ರಿ ಸ್ಪೇಷಲ್: ಪರದೇಶಗಳಲ್ಲೂ ಪರಶಿವನ ಆರಾಧನೆ | ಶಿವನ ವಿಶ್ವರೂಪ ಕಂಡೀರಾ?

ಶ್ರೀಲಂಕಾ, ನೇಪಾಳ, ಟಿಬೇಟ್, ಚೀನಾ, ಐರ್ಲೆಂಡ್, ಇಟಲಿಯ ವ್ಯಾಟಿಕನ್ ಸಿಟಿ, ಆಫ್ರಿಕಾ ವಿಯೋಟ್ನಾಂ ದೇಶಗಳಲ್ಲೂ ಶಿವನ ಬೇರೆ ಬೇರೆ ಹೆಸರಿನ ದೇಗುಲಗಳಿವೆ. ಪ್ರಾಚೀನ ನಾಗರಿಕತೆಗಳಾದ ಹರಪ್ಪಾ ಸಂಸ್ಕೃತಿಯ ಮೂಲವೇ ಶಿವನಾಗಿದ್ದಾನೆ. ಈ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ...

Feb 25, 2025 - 08:59
Feb 25, 2025 - 09:01
WhatsApp - 1 WhatsApp - 2 WhatsApp - 3 Join Telegram

Mahashivratri Special-ಶಿವರಾತ್ರಿ ಸ್ಪೇಷಲ್: ಪರದೇಶಗಳಲ್ಲೂ ಪರಶಿವನ ಆರಾಧನೆ | ಶಿವನ ವಿಶ್ವರೂಪ ಕಂಡೀರಾ?

Kannada Mitra - News Desk.

ಆದಿ-ಅಂತ್ಯವಿಲ್ಲದ ಪರಶಿವನು ಎಲ್ಲ ಎಲ್ಲೆಗಳನ್ನೂ ಮೀರಿದ ಅನಂತಾತ್ಮನು. ತನ್ನ ಸರಳತೆಯಿಂದಲೇ ಆತ ಜಾತಿ-ಧರ್ಮ, ದೇಶ-ಭಾಷೆ, ಗಡಿಗಳನ್ನು ಮೀರಿ ಬಹುಜನರನ್ನು ಪ್ರಭಾವಿಸಿದ್ದಾನೆ. ಬಹು ಸಂಸ್ಕೃತಿಯನ್ನು ಆಕರ್ಷಿಸಿದ್ದಾನೆ. ಪ್ರಪಂಚದ ಬೇರೆ ಬೇರೆ ಪಂಗಡಗಳು, ಭಿನ್ನ ವಿಭಿನ್ನ ಸಂಸ್ಕೃತಿಗಳು ಶತ ಶತಮಾನಗಳಿಂದಲೂ ಶಿವನನ್ನು ನಾನಾ ಹೆಸರುಗಳಲ್ಲಿ ಆರಾಧಿಸಿಕೊಂಡು ಬಂದಿವೆ.

ಶ್ರೀಲಂಕಾ, ನೇಪಾಳ, ಟಿಬೇಟ್, ಚೀನಾ, ಐರ್ಲೆಂಡ್, ಇಟಲಿಯ ವ್ಯಾಟಿಕನ್ ಸಿಟಿ, ಆಫ್ರಿಕಾ ವಿಯೋಟ್ನಾಂ ದೇಶಗಳಲ್ಲೂ ಶಿವನ ಬೇರೆ ಬೇರೆ ಹೆಸರಿನ ದೇಗುಲಗಳಿವೆ. ಪ್ರಾಚೀನ ನಾಗರಿಕತೆಗಳಾದ ಹರಪ್ಪಾ ಸಂಸ್ಕೃತಿಯ ಮೂಲವೇ ಶಿವನಾಗಿದ್ದಾನೆ.

ಶಿವಭೂಮಿ ಶ್ರೀಲಂಕಾ

ಈ ಪೈಕಿ ರಾವಣನ ನಾಡು ಎಂದೇ ಬಿಂಬಿತವಾಗಿರುವ ನೆರೆಯ ಶ್ರೀಲಂಕಾದಲ್ಲಿ ತಿರುಕೆಥೀಸ್ವರಂ, ಮುನೇಸ್ವರಂ, ನಗುಲೇಸ್ವರಂ, ಕೊನೇಸ್ವರಂ ಹಾಗೂ ಥೊಂಡೀಸ್ವರA ಎಂಬ ಹೆಸರಿನ ಶಿವನ ಐದು ಪ್ರಮುಖ ದೇವಾಲಯಗಳಿವೆ. ವಿಶೇಷವೆಂದರೆ ಆ ನೆಲದ ಸಂತ ತಿರುಮೂರ್ಲರು ತನ್ನ ‘ತಿರುಮಂತಿರ’ ಕೃತಿಯಲ್ಲಿ ಶ್ರೀಲಂಕಾವನ್ನು ‘ಸಿವ ಪೂಮಿ’ ಅಂದರೆ  ಶಿವನ ಭೂಮಿ ಎಂದೇ ಬಣ್ಣಿಸಿದ್ದಾರೆ. ರಾಮಾಯಣದ ಮೂಲ ಪಾತ್ರಗಳಲ್ಲಿ ಒಂದಾಗಿರುವ ರಾವಣ ಶಿವನ ಪರಮ ಭಕ್ತ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗಾಗಿ ರಾವಣನೇ ಕಟ್ಟಿದ ಲಂಕೆಯನ್ನು ‘ಶಿವಭೂಮಿ’ ಎಂದು ಉಲ್ಲೇಖಿಸಿರುವುದರ ಹಿಂದೆ ಪರಂಪರೆಯ ನಿಗೂಢತೆಯೇ ಅಡಗಿದೆ.

ನೇಪಾಳದ ಪಶುಪತಿನಾಥ

ಇನ್ನು ಭಾರತದ ಮತ್ತೊಂದು ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ಶಿವನು ಪಶುಪತಿನಾಥನೆಂದೇ ಸುಪ್ರಸಿದ್ಧ. ಇಲ್ಲಿ ಹಿಂದೂಗಳಲ್ಲದೆ ಬೌದ್ಧರಿಗೂ ಪಶುಪತಿನಾಥ ಪೂಜನೀಯ. ಭಾಗ್ಮತಿ ನದಿಯ ದಂಡೆಯ ಮೇಲಿರುವ ಪಶುಪತಿನಾಥ ದೇವಾಲಯ ಜಗತ್ತಿನ ಅನೇಕ ದೇಶಗಳ ಶಿವಭಕ್ತರನ್ನು ಆಕರ್ಷಿಸುತ್ತಿದೆ. ಈ ಪುರಾತನ ದೇಗುಲದಲ್ಲಿ ಪಶುಪಾಲಕ ರೂಪದಲ್ಲಿರುವ ಶಿವ ಹಾಗೂ ಟಗರಿನ ಕೆತ್ತನೆಗಳಿವೆ. ಅದೇ ಪ್ರಕಾರ ಟಿಬೆಟಿಯನ್ ಬೌದ್ಧ ಧರ್ಮಿಯರಲ್ಲೂ ಶಿವನಿಗೆ ಅಗ್ರ ಸ್ಥಾನವಿದೆ.

ಇಂಡೋ-ಟಿಬೆಟಿಯನ್ ವಜ್ರಾಯನ ಬೌದ್ಧ ಧರ್ಮದ ಪ್ರಾರಂಭಿಕ ಹಂತದ ಪಂಗಡಗಳಲ್ಲಿ ಒಂದಾದ ‘ನ್ಯಿಂಗ್ಮ’ ಪಂಗಡದ ಸಂರಕ್ಷಕನೇ ಈ ಶಿವ ಮಹಾದೇವ ಎನ್ನಲಾಗುತ್ತದೆ. ಲ್ಹಾ ಛೆನ್ ಎಂದು ಕರೆಯಲ್ಪಡುವ ಮಹಾದೇವ ನ್ಯಿಂಗ್ಮದ ಪವಿತ್ರ ಧಾರ್ಮಿಕ ಗ್ರಂಥಗಳನ್ನು ಕಾಪಾಡುವ ದೈವವಾಗಿದ್ದೆ. ಟಿಬೆಟಿಯನ್ ಭಾಷೆಯಲ್ಲಿ ಲ್ಹಾ ಛೆನ್ ಅಂದರೆ ‘ಮಹಾ ದೇವರು’ ಎಂದರ್ಥ. ಇದು ವಿಶೇಷವಾಗಿ ಮಹಾದೇವನನ್ನು ಕುರಿತೇ ಸೂಚಿಸುವ ಪದವಾಗಿದೆ. ಶಿವರುದ್ರ ಬೌದ್ಧರ ತಾಂತ್ರಿಕ ಗ್ರಂಥಗಳಲ್ಲಿ ಬಹಳ ಪ್ರಚಲಿತವಾಗಿದ್ದಾನೆ.

ಚೀನಾ, ಐರ್ಲೆಂಡ್‌ನಲ್ಲೂ ಶಿವಾರಾಧನೆ 

ಇನ್ನು ಚೀನಾ, ಐರ್ಲೆಂಡ್‌ನಲ್ಲಿಯೂ ಶಿವಾರಾಧನೆ ಸಾಮಾನ್ಯವಾಗಿದೆ. ಚೀನಾದ ಫುಜಿಯನ್ ಪ್ರಾಂತ್ಯದಲ್ಲಿರುವ ಖುವಾನ್ಜೊಹ ಪ್ರದೇಶದ ಕ್ಸಿನ್ಮೆನ್ ಎನ್ನುವ ಸ್ಥಳದಲ್ಲಿ ಆರನೇ ಶತಮಾನದ ಶಿವ ದೇಗುಲದ ಪಳೆಯುಳಿಕೆಗಳು ಕಂಡು ಬಂದಿವೆ. ವಿಶೇಷವೆಂದರೆ 1950ರ ಆಸುಪಾಸಿನಲ್ಲಿ ಮಕ್ಕಳಿಲ್ಲದ ಚೀನಿ ಮಹಿಳೆಯರು ಈ ದೇಗುಲಕ್ಕೆ ಹೋಗಿ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸಿದ್ದರ ಬಗ್ಗೆ ಹಲವೆಡೆ ವಿವರಣೆಗಳಿವೆ.

ಅದೇ ರೀತಿ ಐರ್ಲೆಂಡಿನಲ್ಲಿಯೂ ಪ್ರಾಚೀನ ಶಿವಲಿಂಗದ ಕುರುಹು ಲಭಿಸಿದೆ. ಈ ದೇಶದ ಕೌಂಟಿ ಮೆಥ್‌ನಲ್ಲಿ ಹಿಲ್ ಆಫ್ ತಾರಾ ಎನ್ನುವ ಬೆಟ್ಟದ ಮೇಲೆ ಸ್ಥಳೀಯರು Stone of Destiny ಎಂದು ಕರೆಯಲ್ಪಡುವ ‘ಲಿಯ ಫೇಯ್ಲ ಎನ್ನುವ ನಿಗೂಢವಾದ ಬೃಹತ್ ಶಿಲೆಯೊಂದಿದೆ. ಅಲ್ಲಿನ ದಂತಕಥೆಗಳ ಪ್ರಕಾರ ಐರ್ಲೆಂಡನ್ನು ಕ್ರಿ.ಪೂ 1897ರಿಂದ 1700ರ ವರೆಗೆ ಆಳಿದ ಧನು ದೇವತೆಯ ಮಕ್ಕಳಾದ ತುವಾಥ ಡೇ ಡನನ್ ಅವರು ಈ ಬೃಹತ್ ಶಿಲೆಯನ್ನು ಸ್ಥಾಪಿಸಿದ್ದು; ಕ್ರಿ.ಶ 500ರ ವರೆಗೆ ಐರಿಷ್ ರಾಜರ ಪಟ್ಟಾಭಿಷೇಕ ಇದರ ಸಮ್ಮುಖದಲ್ಲಿಯೇ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. 

ವ್ಯಾಟಿಕನ್ ನಗರದಲ್ಲಿ ಶಿವ 

ಅದೇ ರೀತಿ ಕ್ರಿಶ್ಚಿಯನ್ ಪಂಗಡಗಳಲ್ಲಿ ಒಂದಾದ ಕೆಥೋಲಿಕ್ ಪಂಥದ ಕೇಂದ್ರಸ್ಥಳವಾದ ವ್ಯಾಟಿಕನ್ ನಗರದ ಉತ್ಖನನದಲ್ಲಿ ದೊರೆತ ಒಂದು ಶಿವಲಿಂಗವನ್ನು ರೋಮಿನ ವ್ಯಾಟಿಕನ್‌ನ ಎಟ್ರೂಸ್ಕನ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿರಿಸಲಾಗಿದೆ. ವಿಸ್ಮಯವೆಂದರೆ ಇಲ್ಲಿ ಪ್ರದರ್ಶನಕ್ಕಿಡಲಾದ ಶಿವಲಿಂಗಗಳ ಮಾದರಿಯ ಹಲವು ಶಿವಲಿಂಗಗಳು ಇಟಲಿಯಾದ್ಯಂತ ಉತ್ಖನನದ ಸಮಯದಲ್ಲಿ ಕಂಡು ಬಂದಿವೆ. 

ಪುರಾತನ ನಾಗರಿಕತೆಗಳಲ್ಲಿ ಒಂದಾದ ಹರಪ್ಪ ಸಂಸ್ಕೃತಿಯ ಕಣ ಕಣದಲ್ಲೂ ಶಿವನ ಹೆಗ್ಗುರುತಿರುವುದು ಈಗಾಗಲೇ ವಿವಿಧ ಹಂತಗಳಲ್ಲಿ ಜಗಜ್ಜಾಹೀರಾಗಿದೆ. 1940ರಲ್ಲಿ ಪುರಾತತ್ತ್ವ ಶಾಸ್ತ್ರಜ್ಞ ಎಂ.ಎಸ್.ವಾಟ್ಸ್ ಎಂಬುವವರು ಐದು ಸಾವಿರ ವರ್ಷಗಳಷ್ಟು ಹಳೆಯ ಮೂರು ಶಿವಲಿಂಗಗಳನ್ನು ಹರಪ್ಪದಲ್ಲಿ ಕಂಡು ಹಿಡಿದಿದ್ದರು.

ಆರು ಸಾವಿರ ವರ್ಷದಷ್ಟು ಪುರಾತನ ಶಿವಲಿಂಗವೊಂದನ್ನು ದಕ್ಷಿಣ ಆಫ್ರಿಕಾದ ಸುದ್ವಾರ ಎನ್ನುವ ಗುಹೆಯಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಜೊತೆಗೆ ವಿಯೆಟ್ನಾಂ ಮತ್ತು ಇಂಡೋನೇಷಿಯದ ಹಲವು ಪ್ರದೇಶಗಳಲ್ಲಿ ಸಾವಿರಾರು ವರ್ಷಗಳಷ್ಟು ಪುರಾತನ ಶಿವಲಿಂಗಗಳು ದೊರಕಿವೆ. 

WhatsApp - 1 WhatsApp - 2 WhatsApp - 3 Join Telegram