Dairy Farming-ಹೈನುಗಾರಿಕೆಯಲ್ಲಿ ಯಶಸ್ಸು ಗಳಿಸಲು ಈ ಸೂತ್ರ ಅನುಸರಿಸಿ | ಲಾಭದಾಯಕ ಹೈನುಗಾರಿಕೆ ಸೂತ್ರಗಳು

ಹೈನುಗಾರಿಕೆಯಲ್ಲಿ ಯಶಸ್ಸು ಗಳಿಸಲು ಅನುಸರಿಸಬೇಕಾದ ಕ್ರಮಗಳೇನು? ಹೈನು ರಾಸುಗಳ ಆಯ್ಕೆ, ಕೃತಕ ಗರ್ಭಧಾರಣೆ, ಹೈನು ರಾಸುಗಳ ಆರೋಗ್ಯ ಕಾಳಜಿ ಹೇಗೆ? ಇತ್ಯಾದಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

Feb 23, 2025 - 12:01
WhatsApp - 1 WhatsApp - 2 WhatsApp - 3 Join Telegram

Dairy Farming-ಹೈನುಗಾರಿಕೆಯಲ್ಲಿ ಯಶಸ್ಸು ಗಳಿಸಲು ಈ ಸೂತ್ರ ಅನುಸರಿಸಿ | ಲಾಭದಾಯಕ ಹೈನುಗಾರಿಕೆ ಸೂತ್ರಗಳು

Kannada Mitra - News Desk.

ಕೃಷಿಯೊಂದಿಗೆ ಪಶುಪಾಲನೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೈನುಗಾರಿಕೆ ಮಾಡುವುದರಿಂದ ತಮ್ಮ ಕುಟುಂಬದ ಆರೋಗ್ಯದ ಜೊತೆಗೆ ಆದಾಯವನ್ನು ಹೆಚ್ಚಿಸಬಹುದು. ಪ್ರಪಂಚದಲ್ಲಿಯೇ ಭಾರತ ಹಾಲಿನ ಉತ್ಪಾದನೆಯಲ್ಲಿ ಮೊದಲನೆ ಸ್ಥಾನ ಪಡೆದುಕೊಂಡಿದೆ. ಇಂದಿಗೂ ಸಹ ಕೃಷಿ ಹೊರತುಪಡಿಸಿದರೆ ಹೈನುಗಾರಿಕೆ ಗ್ರಾಮೀಣ ಪ್ರದೇಶಗಳಲ್ಲಿ ರೈತರ ಪ್ರಮುಖ ಆದಾಯ ಮೂಲವಾಗಿದೆ.

ನಮ್ಮ ದೇಶದ ತಳಿಗಳಾದ ಸಹಿವಾಲ್, ಗಿರ್, ಮಿಶ್ರ ತಳಿಗಳಾದ ಜರ್ಸಿ ಮತ್ತು ಹೆಚ್ ಎಫ್, ಎಮ್ಮೆ ತಳಿಗಳಲ್ಲಿ ಮರ‍್ರಾ ಮತ್ತು ಸುರ್ತಿ ಹೈನುಗಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಈ ತಳಿಗಳಲ್ಲಿ ಹಾಲಿನ ಉತ್ಪತ್ತಿ ಪ್ರಮಾಣವು ಹೆಚ್ಚಾಗಿರುತ್ತದೆ ಹಾಗೂ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ.

ಇದರ ಜೊತೆಗೆ ಕಲಬುರಗಿ, ಬೀದರ್ ಜಿಲ್ಲೆಯ ದೇವಣಿ ತಳಿ ಹಾಲಿನ ಉತ್ಪತ್ತಿ ಕಡಿಮೆ ಇದ್ದರೂ ಅವುಗಳ ಜೊತೆಗೆ ಈ ಮೇಲಿನ ಹಸುಗಳ ಕೃತಕ ಗರ್ಭಧಾರಣೆ ಮಾಡುವುದರಿಂದ ಉತ್ತಮವಾದ ಹಾಲಿನ ಉತ್ಪತ್ತಿ ಪಡೆಯಬಹುದು ಹಾಗೂ ಗಂಡು ಕರುಗಳು ಹುಟ್ಟಿದರೆ ಅದನ್ನು ಮಾರಾಟ ಮಾಡಿ ಲಾಭ ಗಳಿಸಬಹುದು. 

ಹೈನು ರಾಸುಗಳ ಆಯ್ಕೆ

ಹೈನು ರಾಸುಗಳ ಆಯ್ಕೆಯಲ್ಲಿ ಎಚ್ಚರಿಕೆ ಬಹಳ ಮುಖ್ಯ. ಆಯ್ಕೆ ಮಾಡುವ ಹಸುಗಳು ಒಂದರಿಂದ ಮೂರನೇ ಸೂಲಿನ ಒಳಗಿದ್ದು ಸೌಮ್ಯ ಸ್ವಭಾವ ಹೊಂದಿರಬೇಕು. ಆರೋಗ್ಯದಿಂದ ಇರಬೇಕು. ಮೃದುವಾದ ಕೂದಲು, ನುಣುಪಾದ ಚರ್ಮ ಹೊಂದಿರಬೇಕು. ಕಾಂತಿಯುತ ಕಣ್ಣುಗಳು ಹೊಂದಿರಬೇಕು. ಕೆಚ್ಚಲು ದೊಡ್ಡದಾಗಿದ್ದು ಮತ್ತು ಮೃದುವಾಗಿರಬೇಕು. 

ಕೆಚ್ಚಲು ಮೇಲೆ ಹಾಗೂ ಮುಂದೆ ಇರುವ ರಕ್ತನಾಳಗಳು ದೊಡ್ಡದಾಗಿದ್ದು ಕಣ್ಣಿಗೆ ಎದ್ದು ಕಾಣುವ ಹಾಗೆ ಇರಬೇಕು. ಎಲ್ಲ ಮೊಲೆ ತೊಟ್ಟುಗಳು ಸಮನಾಗಿದ್ದು ದೊಡ್ಡದಾಗಿರಬೇಕು. ಗರ್ಭಧರಿಸಿದ ಹಸುಗಳನ್ನು ಖರೀದಿ ಮಾಡಬೇಕಾದರೆ ತುಂಬು ಗರ್ಭಿಣಿ ಹಸುವನ್ನು ಮಾತ್ರ ಖರೀದಿ ಮಾಡಬೇಕು. ಸದೃಢವಾದ ಕಾಲು ಹೊಂದಿರಬೇಕು ಹಾಗೂ ತೊಡೆಗಳ ನಡುವೆ ಹೆಚ್ಚಿನ ಅಂತರ ಇರಬೇಕು.

ಕೃತಕ ಗರ್ಭಧಾರಣೆ 

ಕೃತಕ ಗರ್ಭಧಾರಣೆ ಪಶುಪಾಲನ ಇಲಾಖೆಯ ಒಂದು ಮಹತ್ವದ ಕಾರ್ಯವಾಗಿದ್ದು ಇದರಿಂದ ರೈತರು ಅಧಿಕ ಉಪಯೋಗಗಳನ್ನು ಪಡೆಯಬಹುದು. ಕೃತಕ ಗರ್ಭಧಾರಣೆಯಿಂದಾಗಿ ನಾಟಿ ತಳಿಯ ರಾಸುಗಳಿಂದ ಸಹ ಅಧಿಕ ಹಾಲು ಉತ್ಪಾದನೆ ಮಾಡಬಹುದಾಗಿದೆ. ದುಬಾರಿ ವೆಚ್ಚದ ಹೋರಿಗಳನ್ನು ಪಾಲನೆ ಮಾಡುವುದು ತಪ್ಪಿಸಬಹುದಾಗಿದೆ. ಹೋರಿಗಳಿಂದ ಹಸುಗಳಿಗೆ ಹರಡುವ ಕೆಲವೊಂದು ರೋಗಗಳನ್ನು ತಪ್ಪಿಸಬಹುದಾಗಿದೆ. 

ಕೃತಕ ಗರ್ಭಧಾರಣೆಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ರಾಸುಗಳಿಗೆ ಗರ್ಭಧಾರಣೆ ಮಾಡಬಹುದು. ಹೈನುಗಾರಿಕೆ ಅಭಿವೃದ್ಧಿಯಲ್ಲಿ ಕೃತಕ ಗರ್ಭಧಾರಣೆ ಮಹತ್ವವಾಗಿದೆ. ಹೈನುಗಾರಿಕೆಯಲ್ಲಿ ಕರುಗಳು ಬೋನಸ್ ಇದ್ದಂತೆ. ಮಿಶ್ರತಳಿ ಹಸುಗಳ ಹೆಣ್ಣು ಕರುಗಳು ಹಾಗೂ ನಾಟಿ ತಳಿಯ ಗಂಡು ಕರುಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ವರ್ಷಕ್ಕೊಂದು ಕರು ಎಂಬ ಅಂಶ ಪಾಲಿಸಿದರೆ ರೈತರು ಹೈನುಗಾರಿಕೆ ಲಾಭ ಗಳಿಸಬಹುದು. 

ಲಾಭದಾಯಕ ಹೈನುಗಾರಿಕೆ ಸೂತ್ರಗಳು

ಕೃತಕ ಗರ್ಭಧಾರಣೆ ಮಾಡಿದ ನಂತರ ಒಂದೂವರೆ ತಿಂಗಳ ನಂತರ ಗರ್ಭ ಪರೀಕ್ಷೆ ಮಾಡಿಸಿ ಗರ್ಭಧಾರಣೆ ಆಗಿರುವುದನ್ನು ದೃಢಪಡಿಸಿಕೊಳ್ಳಬೇಕು.

ಗರ್ಭ ಧರಿಸಿದ ರಾಸುಗಳಿಗೆ ಹೆಚ್ಚಿನ ಆರೈಕೆ ಮಾಡಬೇಕು. ಐದರಿಂದ ಏಳನೇ ತಿಂಗಳವರೆಗೆ ಕರುಗಳು ಪೋಷಣೆ ಸಲುವಾಗಿ ದಿನಕ್ಕೆ ಅರ್ಧ ಕೆ.ಜಿ. ಪಶು ಆಹಾರವನ್ನು ಕೊಡಬೇಕು.

ಏಳು ತಿಂಗಳ ಗರ್ಭದ ರಾಸುವಿನಿಂದ ಹಾಲು ಹಿಂಡುವುದನ್ನು ನಿಲ್ಲಿಸಬೇಕು. ಎಂಟು ತಿಂಗಳ ಗರ್ಭದ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಕೆಚ್ಚಲನ್ನು ಮೃಧುವಾಗಿ ತೀಡಿದರೆ ಕೆಚ್ಚಲು ಬೆಳೆಯುತ್ತದೆ.

ಕರು ಹಾಕುವ ದಿನ ಮತ್ತು ಸೆತ್ತೆ ಬೀಳುವ ವರೆಗೂ ಆ ರಾಸುವನ್ನು ಒಂದು ಕೊಟ್ಟಡಿಯೊಳಗೆ ಮೆತ್ತನೆಯ ಹುಲ್ಲಿನಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕು. ಕರು ಹುಟ್ಟಿದ ನಂತರ ಅದರ ಮೆಲೀನ ಮಾಸನ್ನು ತೆಗೆದು ಹತ್ತು ಹದಿನೈದು ನಿಮಿಷದ ಒಳಗೆ ಗಿಣ್ಣದ ಹಾಲು ಕುಡಿಸಬೇಕು.

ಕರು ಹಾಕಿದ ನಂತರ ಎಂಟರಿAದ 10 ಗಂಟೆಗಳ ಒಳಗಾಗಿ ಮಾಸ ಬಿಳುತ್ತದೆ ಬೀಳದಿದ್ದರೆ ಹತ್ತಿರದ ಪಶುವೈದ್ಯರಿಗೆ ತಿಳಿಸಬೇಕು. ಕರುವಿನ ಹೊಕ್ಕಳು ಬಳ್ಳಿಗೆ 10-15 ಸೆಂಟಿಮೀಟರ್ ಬಿಟ್ಟು ಅದನ್ನು  ಕತ್ತರಿಸಿ ಟೆಂಚರ್ ಅಯೋಡಿನ್ ಅಥವಾ ಡೆಟಾಲ್ ಬಳಸಬೇಕು.

ಕರುಗಳಿಗೆ 10 ದಿನದಲ್ಲಿ ಜಂತು ನಾಶಕ ಔಷಧಿ ಕುಡಿಸಬೇಕು. ಹದಿನೈದು ದಿನದ ವಯಸ್ಸಿನ ಕರುಗಳಿಗೆ ಮೃಧುವಾದ ಹುಲ್ಲುಗಳನ್ನು ಮೆಲುಕು ಹಾಕಲು ಕೊಡಬೇಕು. ಹೆಣ್ಣು ಕರುಗಳು ಮೊದಲನೇ ಸಲ ಕೃತಕ ಗರ್ಭಧಾರಣೆಗೆ ಬಂದಾಗ ಅದರ ಶರೀರ ತೂಕ 260-280 ಕೆ.ಜಿ. ಹೊಂದಿರಬೇಕು ಹಾಗೂ 2 ವರ್ಷ ತುಂಬಿರಬೇಕು.

ಕೆಲವು ರಾಸುಗಳು ಮೂಕ ಬೆದೆಯನ್ನು ತೋರಿಸುತ್ತವೆ. ಅವುಗಳ ಮೇಲೆ ಗಮನ ಹರಿಸಬೇಕು. ಅವುಗಳಿಗೆ ದಿನಕ್ಕೆ ಅರ್ಧದಿಂದ ಒಂದು ಕೆ. ಜಿ.ಯಷ್ಟು ಮೊಳಕೆ ಹುರಳಿ ರುಬ್ಬಿ, ಬೆಲ್ಲ ಅಥವಾ ಉಪ್ಪು ಹಾಕಿ ಬೇಯಿಸಿ 10ರಿಂದ 20 ದಿನದ ವರೆಗೆ ಕೊಟ್ಟರೆ ಮೂಕ ಬೆದೆಯನ್ನು ಗುರುತು ಹಿಡಿಯಬಹುದು.

ರಾಸುಗಳು 21 ದಿನಗಳಿಗೊಂದು ಸಲ ಬೆದೆಗೆ ಬರುತ್ತವೆ. ಒಂದು ವೇಳೆ ಬರದಿದ್ದರೆ ಹತ್ತಿರದ ಪಶು ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು.

ಹೈನು ರಾಸುಗಳ ಆರೋಗ್ಯ ಕಾಳಜಿ

ವರ್ಷಕ್ಕೆ ಎರಡು ಬಾರಿ ಜಂತುನಾಶಕ ಔಷಧಿಯನ್ನು ಕುಡಿಸಬೇಕು ಹಾಗೂ ಕಾಲು ಮತ್ತು ಬಾಯಿ ರೋಗದ ವಿರುದ್ಧ ಲಸಿಕೆಯನ್ನು ಹಾಕಿಸಬೇಕು.

ಮಳೆಗಾಲದ ಆರಂಭದಲ್ಲಿ ಚಪ್ಪೆ ರೋಗ ಹಾಗೂ ಗಂಟಲು ಬೇನೆ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು.

ರಾಸುಗಳಿಗೆ ಆಹಾರ ಸಮತೋಲನ ಅಂದರೆ ದಿನದಲ್ಲಿ ಒಂದು ಸಲ ಹಸಿಮೇವು, ಒಂದು ಸಲ ಒಣ ಮೇವು ಹಾಗೂ ಒಂದು ಸಲ ಹಿಂಡಿ ಅಥವಾ ಚುನ್ನಿ ಕೊಡಬೇಕು. ಶುದ್ಧವಾದ ನೀರನ್ನು ಬಳಸಬೇಕು.

ನಿರಂತರವಾಗಿ ಮಿತಿಯಾಗಿ ಖನಿಜ ಪುಡಿಯನ್ನು ಕೊಡಬೇಕು. ಇದರಿಂದ ರಾಸುಗಳು ಆರೋಗ್ಯವಾಗಿರುತ್ತವೆ. ಹಸುಗಳನ್ನು ಆಗಾಗ ಪಶುವೈದ್ಯರ ಸಹಾಯದಿಂದ ಆರೋಗ್ಯ ತಪಾಸಣೆ ಮಾಡಿಸಬೇಕು.

| ಡಾ. ತೃಪ್ತಿ ಸೂರ್ಯಕಾಂತ ಕಟ್ಟಿಮನಿ, ಪಶುವೈದ್ಯರು

WhatsApp - 1 WhatsApp - 2 WhatsApp - 3 Join Telegram